Basanagowda Daddal: ಶಾಸಕ ಬಸನಗೌಡ ದದ್ದಲ್ ಮನೆಯಲ್ಲಿ ಇಂದು ಮತ್ತೆ ಇಡಿ ಪರಿಶೀಲನೆ!
ರಾಯಚೂರು ಜುಲೈ 11: ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ ಮಾಡಿ ಸರಿ ಸುಮಾರು 17 ಗಂಟೆಗಳ ಕಾಲ ಮನೆ ಪರಿಶೀಲಿಸಿದೆ. ಬಳಿಕ ಇಡಿ ಅಧಿಕಾರಿಗಳು ತಾತ್ಕಾಲಿಕ ವಿರಾಮ ನೀಡಿ, ಪರಿಶೀಲನೆಗೆ ಬ್ರೇಕ್ ಹಾಕಿದ್ದು, ಶಾಸಕರ ಮನೆಯಲ್ಲೆ ಕಳೆದ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಇಂದು ಮತ್ತೆ ಪರಿಶೀಲನೆ ಮುಂದುವರೆಸಿದ್ದಾರೆ.
ರಾಯಚೂರು ನಗರದ ಆರ್ ಆರ್ ಬಡಾವಣೆಯಲ್ಲಿನ ಮನೆಯಲ್ಲಿ ವಾಸ್ತವ್ಯ ಹೂಡಿರೋ ಇಡಿ ಅಧಿಕಾರಿಗಳು, ದದ್ದಲ್ ಮನೆ ಮುಂಭಾಗ ಬಂದೋಬಸ್ತ್ ಗಾಗಿ ಪೊಲೀಸರನ್ನು ನಿಯೋಜಸಿದ್ದಾರೆ. ಅತ್ತ ಮಾಜಿ ಆಪ್ತ ಸಹಾಯಕ ಪಂಪಣ್ಣ ಮನೆಯಲ್ಲೂ ಇಡಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದಾರೆ. ರಾತ್ರಿ 11.20ರವರೆಗೆ ಪರಿಶೀಲನೆ ಮಾಡಿ ತಾತ್ಕಾಲಿಕವಾಗಿ ಮುಕ್ತಾಯಗೊಳಿಸಿದ್ದ ಅಧಿಕಾರಿಗಳು, ಇಂದು ಬೆಳಗ್ಗೆ ಪುನಃ ಮನೆ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ರ ಆಪ್ತ ಸಹಾಯಕರಾಗಿದ್ದ ಪಂಪಣ್ಣನವರ ನಗರದ ಮನೆ ಮೇಲೂ ಇಡಿ ಅಧಿಕಾರಿಗಳು ಬುಧವಾರ ಸಂಜೆ ದಾಳಿ ಮಾಡಿದ್ದಾರೆ. ನಗರದ ಆಜಾದ್ ನಗರದಲ್ಲಿನ ರಾಯಲ್ ಪೋರ್ಟ ಅಪಾರ್ಟ್ಮೆಂಟ್ ನಲ್ಲಿರುವ ಮನೆಯಲ್ಲಿ ದಾಳಿ ನಡೆಸಲಾಗಿದೆ. ಈ ಸಮಯದಲ್ಲಿ ಪಂಪಣ್ಣ ಮನೆಯಲ್ಲಿ ಇರಲಿಲ್ಲ. ಅವರನ್ನು ಮನೆಗೆ ಕರೆಯಿಸಿ ಮಾಹಿತಿ ಪಡೆಯಲಾಗಿದೆ. ಕೆಲ ದಿನಗಳ ಹಿಂದೆ ಪಿಎ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ನೂತನವಾಗಿ ಎಂಎಲ್‌ಸಿಯಾಗಿರುವ ವಸಂತಕುಮಾರ್ ಬಳಿ ಆಪ್ತ ಸಹಾಯಕರಾಗಿ ಸೇರಿ ಕೊಂಡಿದ್ದರು.
ಬಳ್ಳಾರಿಯ ನೆಹರು ಕಾಲೊನಿಯಲ್ಲಿರುವ ಬಿ.ನಾಗೇಂದ್ರ ಮನೆ ಮೇಲೂ ಬೆಳಗ್ಗೆ 3ರಿಂದ 4 ಅಧಿಕಾರಿಗಳಿದ್ದ ತಂಡ ದಾಳಿ ಮಾಡಿದೆ. ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ ಅಧಿಕಾರಿಗಳು, ನಾಗೇಂದ್ರರ ಮನೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್ಪಿಎಫ್ ಯೋಧರ ಸಹಕಾರದಿಂದ ದಾಳಿ ನಡೆಸಿದೆ.
ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ರಾಮ್ಕ್ವ್ ಅಪಾರ್ಟ್ಮೆಂಟ್ನಲ್ಲಿರುವ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದೇ ರೀತಿ ಬಸವನಗೌಡ ದದ್ದಲ್ ನಿವಾಸವಲ್ಲದೆ, ಬೆಂಗಳೂರು ನಗರದ ಯಲಹಂಕ, ಕೋರಮಂಗಲ ಸೇರಿದಂತೆ ಏಕಕಾಲದಲ್ಲಿ 18 ಕಡೆಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇದರ ಜೊತೆಗೆ ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಪದ್ಮನಾಭ್ ನಿವಾಸ, ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ್ ವರ್ಮಾ ನಿವಾಸ ಕಚೇರಿ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications