ಮಸ್ಕಿಯ ಪ್ರತಾಪ್ ಗೌಡಗೆ ಸುಗಮವಾದ ಉಪ ಚುನಾವಣಾ ಹಾದಿ
ರಾಯಚೂರು, ಡಿಸೆಂಬರ್ 12: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಉಪ ಚುನಾವಣೆಯ ಹಾದಿ ಸುಗಮವಾಗಿದೆ. ಅವರ ಮೇಲೆ ದಾಖಲಿಸಲಾಗಿದ್ದ ಚುನಾವಣಾ ದೂರನ್ನು ಬಸನಗೌಡ ತುರ್ವಿನಹಾಳ ವಾಪಸ್ ಪಡೆದಿದ್ದರಿಂದ ಇದೀಗ ಪ್ರತಾಪ್ ಗೌಡ ಪಾಟೀಲ್ ನಿರಾಳರಾಗಿದ್ದಾರೆ.
೨೦೧೮ ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು ನಕಲಿ ಮತಗಳನ್ನು ಹಾಕಿಸಿದ್ದಾರೆ ಎಂದು ಅರೋಪಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಆರ್.ಬಸನಗೌಡ ತುರ್ವಿನಹಾಳ ಅವರು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟಿದ್ದ ಪ್ರತಾಪ್ ಗೌಡ ಅವರನ್ನು ಅನರ್ಹಗೊಳಿಸಲಾಗಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಪ್ರತಾಪ್ ಗೌಡ ಪಾಟೀಲ್ ಅವರು ಸ್ಪರ್ಧಿಸಿದ್ದರು, ಇವರ ಎದರು ಬಿಜೆಪಿಯಿಂದ ಬಸನಗೌಡ ತುರ್ವಿನಹಾಳ ಸ್ಪರ್ಧಿಸಿ ಸೋತಿದ್ದರು. ದೂರು ಸಲ್ಲಿಸಿದ್ದರಿಂದ ನ್ಯಾಯಾಲಯದಿಂದ ಉಪ ಚುನಾವಣೆಗೆ ತಡೆ ತಂದಿದ್ದರು.

ಸದ್ಯ ಪ್ರತಾಪ್ ಗೌಡ ಅವರು ಬಿಜೆಪಿ ಪಕ್ಷ ಸೇರಿದ್ದಾರೆ. ಹೀಗಾಗಿ ಬಸನಗೌಡ ಅವರಿಗೆ ಪ್ರಕರಣ ವಾಪಸ್ ತೆಗೆದುಕೊಳ್ಳಲು ಬಿಜೆಪಿ ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಸಿಎಂ ಯಡಿಯೂರಪ್ಪ ಹಾಗೂ ಪಕ್ಷ ಒತ್ತಡ ಹೇರಿದ್ದರಿಂದ ಕೇಸ್ ಹಿಂಪಡೆದಿದ್ದಾರೆ ಎನ್ನಲಾಗಿದೆ.
ಮಸ್ಕಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲು ಆತಂಕ ಇಲ್ಲದಾಗಿದ್ದು, ಪ್ರತಾಪ್ ಗೌಡ ಅವರು ಸ್ಪರ್ಧಿಸಲು ತೊಂದರೆ ಇಲ್ಲ. ಕೇಸ್ ವಾಪಸ್ ಪಡೆದಿದ್ದರಿಂದ ಚುನಾವಣಾ ಆಯೋಗ ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡಬಹುದು.
ಮಸ್ಕಿ ಕ್ಷೇತ್ರದಂತೆ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿಯೂ ದೂರು ದಾಖಲಿಸಲಾಗಿದ್ದು, ಪ್ರಕರಣ ಇತ್ಯರ್ಥವಾದ ನಂತರ ಅಥವಾ ಪ್ರಕರಣ ವಾಪಸ್ ಪಡೆದ ನಂತರ ಚುನಾವಣೆ ಘೋಷಣೆ ಮಾಡಬಹುದು. ಮುನಿರತ್ನ ಅವರ ಮೇಲೆ ದೂರು ದಾಖಲಾಗಿದೆ. ಅವರು ಕೂಡಾ ಬಿಜೆಪಿ ಸೇರಿ ಉಪ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ.












Click it and Unblock the Notifications