ಖಾನಾಪುರ ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ, ಕ್ಯಾರೆ ಅನ್ನದ ಅಧಿಕಾರಿಗಳು: ಜನಾಕ್ರೋಶ
ರಾಯಚೂರು ಜಿಲ್ಲೆಯ "ಈ" ಒಂದು ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ನೀರಿನ ಸಮಸ್ಯೆ ಎದುರಾಗಿದೆ. ಹಾಗಾದರೆ "ಆ" ಗ್ರಾಮದ ಜನರು ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಯಾವ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನ್ನುವುದನ್ನು ಇಲ್ಲಿ ಗಮನಿಸಿ.
ರಾಯಚೂರು, ಫೆಬ್ರವರಿ, 13: ದೇವದುರ್ಗ ತಾಲೂಕಿನ ಗಬ್ಬೂರು ಸಮೀಪದ ಖಾನಾಪುರ ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇಲ್ಲಿನ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯಿಂದ ಪ್ರತಿನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 2 ರಿಂದ 3 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಎರಡು ಕೊಳವೆ ಬಾವಿಗಳ ಪೈಕಿ ಒಂದು ಬತ್ತಿ ಹೋಗಿದೆ. ಗ್ರಾಮದಲ್ಲಿ ವರ್ಷದಿಂದ ಕುಡಿಯುವ ನೀರಿನ ತೊಂದರೆ ಎದುರಾಗಿದ್ದರೂ ಕೂಡ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮಾತ್ರ ಇಲ್ಲಿಯವರೆಗೂ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.
ಗ್ರಾಮದ ಹೊರಭಾಗದಲ್ಲಿ ಕೊಳವೆ ಬಾವಿ ಕೊರೆಸಿದರೆ ನೀರು ಬರುವ ಸಾಧ್ಯತೆಯಿದೆ. ಆದರೆ ಗ್ರಾಮ ಪಂಚಾಯಿತಿ ಹೊಸ ಕೊಳವೆಬಾವಿ ಕೊರಿಸಲು ಮುಂದಾಗುತ್ತಿಲ್ಲ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವು ಪುನರಾರಂಭಿಸಿಲ್ಲ ಎಂದು ಪಂಚಾಯಿತಿ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬೋರ್‌ವೆಲ್ ದುರಸ್ತಿಗೊಳಿಸಲು ಅಧಿಕಾರಿಗಳ ಗಮನಕ್ಕೆ ತಂದರೆ, ನೋಡಲ್ ಅಧಿಕಾರಿಗೆ ಹೇಳಿದ್ದೇನೆ ಎಂದು ನೆಪ ಹೇಳುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಪಂಚಾಯಿತಿ ನೋಡಲ್ ಅಧಿಕಾರಿಯಾಗಿರುವ ತಾಲೂಕು ಪಂಚಾಯಿತಿ ಇಒ ಅವರು ಒಂದು ದಿನವೂ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಗ್ರಾಮದಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ
ಗ್ರಾಮದ ಹಲವು ಜನರು ದ್ವಿಚಕ್ರ ವಾಹನಗಳ ಮೂಲಕ ಸುತ್ತಲಿನ ತೋಟ, ಗಬ್ಬೂರಿನಿಂದ ನೀರು ತರಬೇಕಾಗಿದೆ. ವಾಹನ ಇಲ್ಲದವರ ಪರಿಸ್ಥಿತಿ ನಡೆದುಕೊಂಡೆ ದೂರದಿಂದ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಇಲ್ಲದವರು ಏನು ಮಾಡಬೇಕು ಎಂದು ಗ್ರಾಮದ ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಅಸಮಾಧಾನ ವ್ಯಕ್ತಪಡಿಸಿದರು.

ಮನವಿಗೆ ಕ್ಯಾರೆ ಅನ್ನದ ಅಧಿಕಾರಿಗಳು
"ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಗ್ರಾಮದಲ್ಲಿ ಒಂದೇ ಬೋರ್‌ವೆಲ್ ಇರುವುದರಿಂದ ಎಲ್ಲ ಕೆಲಸ ಬದಿಗೊತ್ತಿ ಸರತಿಯಲ್ಲಿ ನಿಂತರೂ ನೀರು ಸಿಗುವುದಿಲ್ಲ" ಎಂದು ವೃದ್ಧೆ ರಾಮವ್ವ ಅಳಲು ತೋಡಿಕೊಂಡರು.

ಶಾಶ್ವತ ಕ್ರಮ ಕೈಕೊಳ್ಳಬೇಕೆಂದು ಒತ್ತಾಯ
ಗ್ರಾಮದಲ್ಲಿನ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಅನುಕೂಲ ಮಾಡಿಕೊಡಬೇಕು. ಇಲ್ಲವೇ ಗ್ರಾಮ ಪಂಚಾಯಿತಿ ಶಾಶ್ವತ ಕ್ರಮ ಕೈಕೊಳ್ಳಬೇಕು ಎಂದು ಗ್ರಾಮಸ್ಥರಾದ ತಿರುಕಮ್ಮ, ಮಲ್ಲಮ್ಮ ಒತ್ತಾಯಿಸಿದರು. ಇನ್ನು ಹೇಮನಾಳ ಗ್ರಾಮ ಪಂಚಾಯಿತಿಗೆ ಕಳೆದ ಎಂಟು ವರ್ಷದಿಂದ ಚುನಾವಣೆ ನಡೆಯದೆ ಇರುವುದರಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರೇ ನೋಡಲ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜನರ ಪ್ರಶ್ನೆಗೆ ಅಧಿಕಾರಿಗಳ ಉತ್ತರವೇನು?
ಸಾಮಾನ್ಯವಾಗಿ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗುತ್ತದೆ. ಆದರೆ ನಮ್ಮ ಊರಿನಲ್ಲಿ ಮಾತ್ರ ವರ್ಷಪೂರ್ತಿ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಗಬ್ಬೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ ಶಾಂತಕುಮಾರ ಹೊನ್ನಟಗಿ ಅಸಮಾಧಾನ ವ್ಯಕ್ತಪಡಿಸಿದರು. "ಹೆಚ್ಚಿನ ಜವಾಬ್ದಾರಿ ಇರುವುದರಿಂದ ಪಂಚಾಯಿತಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವಂತೆ ಪಿಡಿಒಗೆ ಸೂಚಿಸುವೆ," ಎಂದು ಹೇಮನಾಳ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಪಂಪಾಪತಿ ಹಿರೇಮಠ ಭರವಸೆ ನೀಡಿದರು.












Click it and Unblock the Notifications