ರಾಯಚೂರು:ಅತಿಥಿ ಉಪನ್ಯಾಸಕರ ನೇಮಕ ವಿಳಂಬ, ವಿದ್ಯಾರ್ಥಿಗಳ ಫಲಿತಾಂಶ ಅತಂತ್ರ
ರಾಯಚೂರು, ಜೂನ್ 08: ದೇವದುರ್ಗ ತಾಲೂಕಿನಾದ್ಯಂತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಮೇ 25ರಂದು ಆದೇಶ ಹೊರಡಿಸಿದೆ. ತರಗತಿ ಪ್ರಾರಂಭವಾಗಿ ವಾರ ಕಳೆದರೂ ಸಹ ಅತಿಥಿ ಉಪನ್ಯಾಸಕ ನೇಮಕವಾಗಿಲ್ಲ.
ತಾಲೂಕಿನಲ್ಲಿನ ಪ್ರಭಾರಿ ಪ್ರಾಂಶುಪಾಲರುಗಳು ಕಳೆದ ವರ್ಷದಂತೆ ಈ ವರ್ಷವೂ ಎರವಲು ಸೇವೆ ಮಾರುಹೋಗುತ್ತಿರುವುದು ವಿದ್ಯಾರ್ಥಿಗಳಿಗೆ, ಪಾಲಕರಿಗೆ ಆಂತಕ ಎದುರಾದರೇ ಅತಿಥಿ ಉಪನ್ಯಾಸಕರಾಗಲು ಕಾಯುತ್ತಿರುವ ಆಕಾಂಕ್ಷಿಗಳಿಗೆ ಹಲವು ಅನುಮಾನಕ್ಕೆ ಪ್ರಾಂಶುಪಾಲರ ನಡೆ ಎಡೆ ಮಾಡಿಕೊಡುತ್ತಿದೆ.

ತಾಲೂಕಿನಲ್ಲಿ ಒಟ್ಟು 7 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಬರುವ ಜಾಲಹಳ್ಳಿಯಲ್ಲಿ ಜುಲೈ ತಿಂಗಳಲ್ಲಿ ಕನ್ನಡ ಹುದ್ದೆ ಖಾಲಿಯಾಗಲಿದೆ. ಹಾಗೂ ಗಬ್ಬೂರು ಕಾಲೇಜಿನಲ್ಲಿ ಇತಿಹಾಸ ಹುದ್ದೆ, ದೇವದುರ್ಗ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಇಂಗ್ಲಿಷ್, ಅರ್ಥಶಾಸ್ತ್ರ ಮತ್ತು ಇತಿಹಾಸ ಹುದ್ದೆಗಳು ಖಾಲಿ ಇವೆ.
ಆದರೆ ಪಟ್ಟಣದ ಬಾಲಕರು ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಎರವಲು ಸೇವೆಯ ಮೂಲಕ ಶೈಕ್ಷಣಿಕ ನ್ಯಾಯ ಕೊಡುವ ಬರದಲ್ಲಿ ಜಿಲ್ಲಾ ಪದವಿಪೂರ್ವ ನಿರ್ದೇಶಕರು ಹಾಗೂ ತಾಲೂಕಿನ ಪ್ರಾಂಶುಪಾಲರುಗಳು ಗ್ರಾಮೀಣ ಅನ್ಯಾಯ ಮಾಡುತ್ತಿದ್ದಾರೆ ಎಂದು ಪಾಲಕರು ಮತ್ತು ಖಾಸಗಿ ಉಪನ್ಯಾಸಕರು ಆರೋಪಿಸುತ್ತಿದ್ದಾರೆ.
ಎರವಲು ಸೇವೆಗೆ ನೇಮಕವಾದ ಉಪನ್ಯಾಸಕರು ತಮ್ಮ ಮೂಲ ಕಾಲೇಜಿನಲ್ಲಿ ಮೂರು ದಿನ ಮತ್ತು ಎರವಲು ಸೇವೆಗೆ ನೇಮಕವಾದ ಕಾಲೇಜಿನಲ್ಲಿ ಮೂರು 3 ದಿನ ಮಾತ್ರ ಪಾಠ ಮಾಡಲಿದ್ದಾರೆ. ಇದರಿಂದ ಮೂಲ ಕಾಲೇಜಿನ ವಿದ್ಯಾರ್ಥಿನಗಳ ಜೊತೆ ಎರವಲು ಕಾಲೇಜಿನ ವಿದ್ಯಾರ್ಥಿಗಳಿಗೂ ಅನ್ಯಾಯವಾಗುತ್ತಿದೆ. ಹಾಗಾಗಿಯೇ ಕಳೆದ ಬಾರಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 158 ವಿದ್ಯಾರ್ಥಿನಿಯರ ಪೈಕಿ 100 ಮಾತ್ರ ದ್ವಿತೀಯ ಮತ್ತು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 56 ವಿದ್ಯಾರ್ಥಿಗಳ ಪೈಕಿ ಕೆವಲ 9 ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ದರ್ಜೆಯಲ್ಲಿ ಪಾಸಾಗಿದ್ದರೆ. ಇದು 2022-23ನೇ ಸಾಲಿನಲ್ಲಿ ಎರಡು ಕಾಲೇಜಿನಲ್ಲಿ ಎರವಲು ಸೇವೆ ನೀಡಿದರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಾಗಿಲ್ಲ ಎಂದು ಇತಿಹಾಸ ಉಪನ್ಯಾಸಕ ಮರಲಿಂಗಪ್ಪ ಕೋಳೂರು ಹೇಳಿದ್ದಾರೆ.
ಕಳೆದ ವರ್ಷ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ನೀಡಿದ್ದರು. ಜಿಲ್ಲಾ ಉಪ ನಿರ್ದೇಶಕರು ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡಿದ್ದರು ಆದರೆ ದೇವದುರ್ಗದಲ್ಲಿ ಮಾತ್ರ ಎರವಲು ಸೇವೆಗೆ ಮಣೆ ಹಾಕಿದ್ದರು.
ಜಿಲ್ಲೆಯ ಉಪನಿರ್ದೇಶಕ ರಾಜಶೇಖರ ಪಠಣ ಶೆಟ್ಟಿ ಹಾಗೂ ತಾಲೂಕಿನ ಪ್ರಭಾರಿ ಪ್ರಾಂಶುಪಾಲರುಗಳ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳದೆ ಎರವಲು ಸೇವೆ ನೇಮಕ ಮಾಡಿದ್ದರಿಂದ ತಾಲೂಕಿನ ಪದವಿ ಪೂರ್ವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕಷ್ಟು ಹಿನ್ನಡೆಯಾಗಿರುವುದಕ್ಕೆ 2022-2023ರ ಸಾಲಿನ ಫಲಿತಾಂಶವೇ ಸಾಕ್ಷಿ.
ಜಿಲ್ಲಾ ಉಪ ನಿರ್ದೇಶಕರಿಗೆ ಎರವಲು ಸೇವೆ ಬದಲಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತಾಲೂಕಿನ 9 ಜನ ಖಾಸಗಿ ಉಪನ್ಯಾಸಕರಿಗೆ ಉದ್ಯೋಗ ನೀಡುವಂತೆ ತಿಳಿಸುವೆ ಎಂದು ಶಾಸಕಿ ಕರೇಮ್ಮ ಜಿ ನಾಯಕ ಹೇಳಿದ್ದಾರೆ.
ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ನೀಡಿದೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ಮಕ್ಕಳಿಗೆ ವಾರದ ಏಳು ದಿನ ತರಗತಿ ನಡೆಸಲಿ ಎಂದು ಖಾಸಗಿ ಉಪನ್ಯಾಸಕ ಸಂಘ ತಾಲೂಕು ಅಧ್ಯಕ್ಷ ಕೆ ವಿನೋದ ಕುಮಾರ ನಾಯಕ ಆಗ್ರಹಿಸಿದ್ದಾರೆ.












Click it and Unblock the Notifications