ರಾಯಚೂರು: ಮಳೆ ಬಾರದೆ, ಕಾಲುವೆ ನೀರು ಸಿಗದೇ ಹತಾಶೆ, ರೈತರಿಂದ ಬೆಳೆ ನಾಶ
ರಾಯಚೂರು ಅಕ್ಟೋಬರ್ 05: ಪ್ರಸಕ್ತ ಮುಂಗಾರು ಕೈಕೊಟ್ಟ ಕಾರಣ ಬೆಳೆಗಳಿಗೆ ಸಮರ್ಪಕ ನೀರು ಸಿಗದೇ ರೈತರು ಕಂಗಾಲಾಗಿದ್ದಾರೆ. ರಾಯಚೂರು ಹಾಗೂ ಮಾನ್ವಿ ತಾಲೂಕಿನ ಹಲವೆಡೆ ರೈತರು ಬೆಳೆಗಳ ನಾಶಕ್ಕೆ ಪಡಿಸುತ್ತಿದ್ದಾರೆ.
ಸಕಾಲಕ್ಕೆ ನೀರು ಸಿಗದೇ ಹತಾಶೆಗೊಳಗಾದ ರೈತರು ತಮ್ಮ ಹೊಲದಲ್ಲಿನ ಭತ್ತ ಬೆಳೆ ನಾಶ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯ ಎಡದಂಡೆ ಕಾಲುವೆ ಕೆಳಭಾಗದ ರಾಯಚೂರು ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಚಿಂತೆಗೀಡಾಗಿದ್ದಾರೆ.

ರಾಯಚೂರು ತಾಲೂಕಿನ ದಿನ್ನಿ, ಮಮದಾಪುರ, ಕಸಬೆಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್, ಕಲಮಲ ಭಾಗದಲ್ಲಿ ರೈತರು ಸುಮಾರು 400 ರಿಂದ 500 ಎಕರೆ ಭತ್ತದ ಜಮೀಗಳಲ್ಲಿ ಕುರಿಗಳನ್ನು ಬಿಟ್ಟು ಮೇಯಿಸುವ ಮೂಲಕ ಬೆಳೆ ಹಾಳು ಮಾಡುತ್ತಿದ್ದಾರೆ. ಇನ್ನೂ ಕೆಲವು ರೈತರು ಟ್ರಾಕ್ಟರ್ ಮೂಲಕವೇ ಬೆಳೆ ನಾಶ ಮಾಡುತ್ತಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಕೇವಲ 54 ಟಿಎಂಸಿ ನೀರು ಲಭ್ಯವಿದ್ದು, ಒಂದು ಬೆಳೆಗೆ ಮಾತ್ರ ನೀರು ಹರಿಸಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಲ್ಲೂ ನಿತ್ಯ 3,900 ಕ್ಯೂಸೆಕ್ ಹರಿಸಿದರೆ ಮಾತ್ರ ನೀರು ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, 3,900 ಕ್ಯೂಸೆಕ್ ಹರಿಸಿದರೆ ಕೊನೆ ಭಾಗಕ್ಕೆ ನೀರು ಬರುವುದೇ ಇಲ್ಲ.

ಕನಿಷ್ಠ 4,100 ಕ್ಯೂಸೆಕ್ ಹರಿಸುವಂತೆ ರೈತರು ಒತ್ತಾಯಿಸಿದ್ದರು. ಅಧಿಕಾರಿಗಳು ಹೇಳುವ ಪ್ರಕಾರ ನಿತ್ಯ 4,100 ಕ್ಯೂಸೆಕ್ ಹರಿಸಲಾಗುತ್ತಿದೆ. ಆದರೂ ಮಾನ್ವಿ ಮತ್ತು ರಾಯಚೂರು ಭಾಗದ ಕೆಲ ನೀರಾವರಿ ಜಮೀನಿಗೆ ನೀರು ಹರಿದೇ ಇಲ್ಲ. ಇದರಿಂದ ಭತ್ತದ ಬೆಳೆಯ ಬೆಳವಣಿಗೆ ಕುಂಠಿತವಾಗಿದೆ.
ತಡವಾಗಿಯಾದರೂ ಕಾಲುವೆಯ ಕೊನೆ ಭಾಗಕ್ಕೆ ನೀರು ಹರಿಯುತ್ತಿತ್ತು. ಈ ಬಾರಿ ಅಕ್ಟೋಬರ್ ಬಂದರೂ ನೀರು ತಲುಪಿಲ್ಲ. ಇದರಿಂದ ತಾಲ್ಲೂಕಿನ ದಿನ್ನಿ, ಮಮದಾಪುರ, ಕಲ್ಲೂರು, ಸಿರವಾರ ಭಾಗದ ಕಲಮಲ ಭಾಗದ ಸಾಕಷ್ಟು ಜಮೀನುಗಳು ಸ್ಥಿತಿ ಇದೆಯಾಗಿದೆ. ಇನ್ನೂ ಕೆಲ ರೈತರು ಮಳೆ ನಂಬಿಯೂ ಭತ್ತ ಬಿತ್ತನೆ ಮಾಡಿದ್ದರು. ಆದರೆ, ಮಳೆಯೂ ಬಾರದೆ ಸಂಕಷ್ಟ ಎದುರಿಸುತ್ತಿದ್ದಾರೆ.
ರೈತರ ಮೇಲೆ ನಷ್ಟದ ಭಾರ
ರೈತರು ಭತ್ತ ನಾಟಿ ಮಾಡಿ ಆಗಲೇ ಒಂದೆರಡು ಬಾರಿ ಕ್ರಿಮಿನಾಶಕ, ಗೊಬ್ಬರ ಸಿಂಪಡಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ. ಪ್ರತಿ ಎಕರೆಗೆ ಏನಿಲ್ಲವೆಂದರೂ ₹25 ಸಾವಿರದಿಂದ ₹30 ಸಾವಿರ ಖರ್ಚಾಗಿದೆ. ಇನ್ನೂ ಕೆಲ ರೈತರು ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಿದ್ದು, ಜಮೀನು ಮಾಲೀಕರಿಗೆ ಆಗಲೇ ಹಣ ಪಾವತಿಸಿದ್ದಾರೆ. ಅದರ ಜೊತೆಗೆ ಬೆಳೆಗೂ ಖರ್ಚು ಮಾಡಿದ್ದು, ನಷ್ಟ ಮೈ ಮೇಲೆ ಎಳೆದುಕೊಳ್ಳುವಂತಾಗಿದೆ.
ರಾಯಚೂರು ತಾಲೂಕಿನ ಮಮದಾಪುರ ಸೇರಿ ಕೆಲ ಗ್ರಾಮಗಳಲ್ಲಿ ಭತ್ತ ಬೆಳೆಯನ್ನು ಸಂಪೂರ್ಣ ನಾಶ ಮಾಡಲಾಗಿದೆ. ಭತ್ತದ ಗದ್ದೆಗೆ ನೀರು ಬಂದಿಲ್ಲ. ಇನ್ನೂ ಕಾಯುತ್ತ ಕುಳಿತರೆ ರೈತರಿಗೆ ಇನ್ನೂ ಹೆಚ್ಚಿನ ನಷ್ಟ ಎದುರಾಗಲಿದೆ. ಹಿಂಗಾರು ಮಳೆ ಉತ್ತಮವಾಗಿ ಸುರಿದರೆ ರೈತರಿಗೆ ತುಸು ಅನುಕೂಲವಾಗಲಿದೆ. ಸರ್ಕಾರ ಕೂಡಲೇ ರೈತರಿಗೆ ನಷ್ಟ ಪರಿಹಾರ ವಿತರಿಸಬೇಕು ಎಂದು ರೈತ ಮುಖಂಡ ಬೂದಯ್ಯ ಸ್ವಾಮಿ ಇಂಗಳದಾಳ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.











Click it and Unblock the Notifications