ರಾಯರ ದರ್ಶನ ಪಡೆದ ರಾಹುಲ್ ಗಾಂಧಿ: ಮಂತ್ರಾಲಯಕ್ಕೆ ಭೇಟಿಕೊಟ್ಟ ಮೊದಲ ಗಾಂಧಿ ವಂಶಸ್ಥ
ರಾಯಚೂರು ಅಕ್ಟೋಬರ್ 20: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಶುಕ್ರವಾರ ರಾಯಚೂರು ಜಿಲ್ಲೆ ಪ್ರವೇಶಿಸಲಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ದರ್ಶನ ಪಡೆದಿದ್ದಾರೆ.
ರಾಹುಲ್ ಗಾಂಧಿ, ರಾಯರ ದರ್ಶನ ಪಡೆದ ನೆಹರು ಕುಟುಂಬದ ಮೊದಲ ಸದಸ್ಯರಾಗಿದ್ದಾರೆ. ವಿಶೇಷವೆಂದರೆ ಮಠದ ಸಾಂಪ್ರದಾಯದಂತೆ ರಾಹುಲ್ ಗಾಂಧಿ ಪಂಚೆ ವಸ್ತ್ರ ಧರಿಸಿ ರಾಯರ ದರ್ಶನ ಪಡೆದುಕೊಂಡರು. ಶ್ರೀಮಠಕ್ಕೆ ರಾಹುಲ್ ಗಾಂಧಿ ಅವರನ್ನ ಬರಮಾಡಿಕೊಂಡ ಶ್ರೀಗಳು, ಮೂಲ ಬೃಂದಾವನ ದರ್ಶನ ಮಾಡಿಸಿದರು. ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆಯುವ ವೇಳೆ ರಾಹುಲ್ ಗಾಂಧಿ ಅವರಿಗೆ ರಾಯರ ಶ್ಲೋಕ ಹೇಳಿಕೊಡುವ ಮೂಲಕ ಶ್ರೀಗಳು ಗಮನ ಸೆಳೆದರು. ಇದಕ್ಕೂ ಮುನ್ನ ಮಂತ್ರಾಲಯ ಗ್ರಾಮ ದೇವತೆ ಮಂಚಲಮ್ಮ ದೇವಿಯ ದರ್ಶನವ ಪಡೆದುಕೊಂಡರು.
ದರ್ಶನದ ಬಳಿಕ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಆಶೀರ್ವಚನ ಪಡೆದು, ಬಳಿಕ ಶ್ರೀಗಳೊಂದಿಗೆ ರಾಹುಲ್ ಗಾಂಧಿ ಒಂದಷ್ಟು ಸಮಯ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಗಳು ರಾಹುಲ್ ಗಾಂಧಿಗೆ ಮಠದ ಕುರಿತು ಪರಿಚಯಿಸಿದರು. ಶ್ರೀ ರಾಘವೇಂದ್ರ ಸ್ವಾಮೀಜಿಗಳ ಪವಾಡಗಳ ಬಗ್ಗೆ ರಾಹುಲ್ ಗಾಂಧಿ ಕೇಳಿ ತಿಳಿದುಕೊಂಡರು. ರಾಹುಲ್ ಗಾಂಧಿ ಕೂಡಾ ಸಮಾಲೋಚನೆ ನಡೆಸಿದರು. ದೇಶದಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಭಾರತ ಐಕ್ಯತಾ ಪಾದಯಾತ್ರೆ ಮಾಡುತ್ತಿರುವುದಾಗಿ ರಾಹುಲ್ ಗಾಂಧಿ ಅವರು ಶ್ರೀಗಳಿಗೆ ಮಾಹಿತಿ ನೀಡಿದರು.ನಂತರ ಸ್ವಾಮೀಜಿ ಶ್ರೀಮಠದಿಂದ ರಾಹುಲ್ ಗಾಂಧಿಗೆ ಸನ್ಮಾನಿಸಿದ್ದಾರೆ. ರಾಹುಲ್ ಗಾಂಧಿ ಶ್ರೀಗಳಿಗೆ ಹಣ್ಣು ಹಂಪಲು ನೀಡಿ ಆಶಿರ್ವಾದ ಪಡೆದರು.

ಇನ್ನು ಚರ್ಚೆ ನಡೆಸಿದ ಬಳಿಕ ಸ್ವಾಮೀಜಿಗಳಿಗೆ ಡಿಕೆ ಶಿವಕುಮಾರ್‌ರಿಂದ ಬೆಳ್ಳಿಯ ಖಡ್ಗವನ್ನು ಪಡೆದ ರಾಹುಲ್ ಗಾಂಧಿ ಶ್ರೀಗಳಿಗೆ ನೀಡಲು ಮುಂದಾದರು. ಆದರೆ ಶ್ರೀಗಳು ಅದನ್ನು ನಯವಾಗಿ ತಿರಸ್ಕರಿಸಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ರಣದೀಪ್ ಸುರ್ಜೇವಾಲಾ, ಬಿಕೆ ಹರಿಪ್ರಸಾದ್, ಬಸನಗೌಡ ಬಾದರ್ಲಿ ಸಾಥ್ ನೀಡಿದರು. ಪಾದಯಾತ್ರೆಯ ನೇತೃತ್ವವಹಿಸಿಕೊಂಡಿರುವ ರಾಹುಲ್ ಗಾಂಧಿ ಮಂತ್ರಾಲಯದ ಹೊರವಲಯದಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಿಗ್ಗೆ 6:30ಕ್ಕೆ ತುಂಗಭದ್ರಾ ಸೇತುವೆಯಿಂದ ಕರ್ನಾಟಕದಲ್ಲಿ ಎರಡನೇ ಹಂತದ ಪಾದಯಾತ್ರೆಯನ್ನು ಆರಂಭಿಸಲಿದ್ದಾರೆ












Click it and Unblock the Notifications