ರಾಯಚೂರಿನಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣದ ಜವಾಬ್ದಾರಿ ಹೊತ್ತ ಕಾಂಗ್ರೆಸ್ ಸರ್ಕಾರ, ಪೊಳ್ಳು ಭರವಸೆಯ BJP ವಿರುದ್ಧ ಜನಾಕ್ರೋಶ
ರಾಯಚೂರು, ಜೂನ್, 11: ಈ ಹಿಂದೆ ಬಿಜೆಪಿ ಸರ್ಕಾರ ರಾಯಚೂರಿನಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿ ಕೈತೊಳೆದುಕೊಂಡಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡಿದೆ. ಈ ಮೂಲಕ ಜಿಲ್ಲಾಸ್ಪತ್ರೆಯ ನಿರ್ಮಾಣದ ಜವಾಬ್ದಾರಿಯನ್ನು ಕಾಂಗ್ರೆಸ್ ಸರ್ಕಾರ ಹೊತ್ತುಕೊಂಡಿದೆ.
ಕಲ್ಯಾಣ ಕರ್ನಾಟಕದಲ್ಲಿಯೇ ಎರಡನೇ ಅತಿ ವಿಶಾಲ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಜಿಲ್ಲಾಸ್ಪತ್ರೆಯೇ ಇಲ್ಲದಿರುವುದು ಜಿಲ್ಲೆಯ ಜನರ ಪಾಲಿಗೆ ನೋವಿನ ಸಂಗತಿಯಾಗಿದೆ. ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಈಗಿರುವ ರಿಮ್ಸ್ ಆಸ್ಪತ್ರೆಯನ್ನೇ ಅವಲಂಬಿಸಬೇಕಿದ್ದು, ಅಲ್ಲಿಯೂ ಜನಜಂಗುಳಿಯಿಂದಾಗಿ ಸರಿಯಾದ ಚಿಕಿತ್ಸೆ ದೊರೆಯುವುದು ಕಷ್ಟಸಾಧ್ಯವಾಗಿದೆ
ಆದ್ದರಿಂದ ಬಹುತೇಕರು ವಿಧಿಯಿಲ್ಲದೇ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.

ಆಸ್ಪತ್ರೆಯ ಕಟ್ಟಿಸುವಂತೆ ಒತ್ತಾಯ
ಆದರೆ ಖಾಸಗಿ ಚಿಕಿತ್ಸೆಯ ವೆಚ್ಚ ಭರಿಸಲಾಗದ ಬಡವರ ಪಾಡು ಹೇಳತೀರದಾಗಿದೆ. ಇದರಿಂದ ಮನಗಂಡ ಐಎಂಎ ಸಂಘಟನೆಯು ಜಿಲ್ಲೆಯಲ್ಲಿ ಒಂದು ಉತ್ತಮ ಆಸ್ಪತ್ರೆಯ ಕಟ್ಟಿಸುವಂತೆ ಸರಕಾರಕ್ಕೆ ಒತ್ತಾಯ ಮಾಡಿದೆ. ಇದರ ನಡುವೆ ಜಿಲ್ಲೆಗೆ ಏಮ್ಸ್ ಬೇಕೆಂಬ ಕೂಗು ಕಳೆದ ಒಂದು ವರ್ಷದಿಂದ ಕೇಳುತ್ತಿದೆ. ಆದರೆ ಹಿಂದಿನ ಸರ್ಕಾರ ಏಮ್ಸ್ ಮಾದರಿ ಆಸ್ಪತ್ರೆ ಘೋಷಿಸಿ ಕೈ ತೊಳೆದುಕೊಂಡಿತ್ತು.
ರೀಮ್ಸ್ ಆಸ್ಪತ್ರೆಯೊಂದಿಗೆ ವಿಲೀನ
ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಏಮ್ಸ್ ಘೋಷಿಸುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಇದರಿಂದ ಜಿಲ್ಲೆಯ ಜನರಲ್ಲಿ ನಿರೀಕ್ಷೆ ಇದೀಗ ಗರಿಗೆದರಿದೆ. ಜಿಲ್ಲೆಯಲ್ಲಿ ಈ ಹಿಂದೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಇತ್ತು. ಆದರೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದುದರಿಂದ ಅಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಅದನ್ನು ಒಪೆಕ್ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಿದ್ದರು.
ನಂತರ ಉದ್ಘಾಟನೆಯಾದ ನೂತನ ರೀಮ್ಸ್ ಆಸ್ಪತ್ರೆಯೊಂದಿಗೆ ಅದನ್ನು ವಿಲೀನಗೊಳಿಸಲಾಯಿತು.
ಹೊರರಾಜ್ಯದಿಂದಲೂ ರೋಗಿಗಳ ಆಗಮನ
ಜಿಲ್ಲೆ ಸೇರಿದಂತೆ ಯಾದಗಿರಿ, ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಿಂದ ಪ್ರತಿನಿತ್ಯ ಸುಮಾರು 1,300 ರಿಂದ 1,400 ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಅದರಲ್ಲಿ 600ಕ್ಕೂ ಅಧಿಕ ಜನರು ದಾಖಲಾಗುತ್ತಾರೆ. 750 ಬೆಡ್ ಇರುವ ಆಸ್ಪತ್ರೆಯಲ್ಲಿ ಕೇವಲ 250 ಸಿಬ್ಬಂದಿ ಮಾತ್ರ ಇರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಇದರಿಂದ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಸಹಜವಾಗಿ ಒತ್ತಡ ಹೆಚ್ಚಿದಂತಾಗಿದೆ.
ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ
ಈ ಹಿಂದೆ ಜಿಲ್ಲೆಯಲ್ಲಿದ್ದ ಸಾರ್ವಜನಿಕ ಆಸ್ಪತ್ರೆಯನ್ನು ರೀಮ್ಸ್‌ನೊಂದಿಗೆ ವಿಲೀನ ಮಾಡಲಾಯಿತು. ಅಲ್ಲದೆ, ಹೊಸ ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಿದ್ದ 23 ಹೆಕ್ಟೇರ್ ಸ್ಥಳದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆಂದು 10 ಹೆಕ್ಟೇರ್ 32 ಗುಂಟೆ ನೀಡಲಾಗಿದೆ. ಉಳಿದ ಜಾಗವನ್ನು ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಈ ಸ್ಥಳದಲ್ಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಇನ್ನಾದರೂ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯುತ್ತದೆಯಾ ಎಂದು ಕಾದುನೋಡಬೇಕಿದೆ.
ರೀಮ್ಸ್ ಆಸ್ಪತ್ರೆಯ ವೈದ್ಯರು ಹೇಳಿದ್ದೇನು?
ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಆದರೆ ನಮ್ಮಲ್ಲಿ ಇರುವ ಸಿಬ್ಬಂದಿಗೆ ಒತ್ತಡ ಕಡಿಮೆ ಆಗುತ್ತದೆ. ಹಾಗೂ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉತ್ತಮ ಸೌಲಭ್ಯ ದೊರೆಯಲು ಅನುಕೂಲ ಆಗುತ್ತದೆ ಎಂದು ರಾಯಚೂರು ರೀಮ್ಸ್ ಆಸ್ಪತ್ರೆಯ ವೈದ್ಯ ಡಾ.ಬಸವರಾಜ ಪೀರಪುರ್ ಹೇಳಿದರು.
ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಅರ್ಧ ಸ್ಥಳವನ್ನು ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದು, ಆ ಸ್ಥಳದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.












Click it and Unblock the Notifications