ಸಾರಥಿಗಳಿಲ್ಲದೆ ನಲುಗುತ್ತಿರುವ ರಾಯಚೂರು ನಗರಸಭೆ: ಸಾರ್ವಜನಿಕರಿಗೆ ತಪ್ಪದ ಪರದಾಟ
ರಾಯಚೂರು, ಆಗಸ್ಟ್ 18: ಕಳೆದ ಮೂರು ತಿಂಗಳಿಂದ ರಾಯಚೂರು ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪೌರಾಯುಕ್ತರಿಲ್ಲದೆ ತೊಂದರೆಯಾಗಿದೆ. ನಗರದ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ. ನಗರದ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಾದ ನಗರಸಭೆ ಅವ್ಯವಸ್ಥೆಯ ಅಗರವಾಗಿದೆ.
ಸಕಾಲದಲ್ಲಿ ಸೌಲಭ್ಯಗಳು ದೊರಕದೆ ರಾಯಚೂರು ನಿವಾಸಿಗಳು ನಿತ್ಯವೂ ಪರದಾಡುವಂತಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ರಾಯಚೂರು ನಗರಸಭೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ಹಿಂದೆ ಬಿದ್ದಿದೆ. ನಗರಸಭೆಗೆ ಸಾರಥಿಗಳಿಲ್ಲದೆ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ.

ನಿತ್ಯವೂ ಈ ಖಾತೆ , ಜನನ, ಮರಣ ಪತ್ರ ಸೇರಿದಂತೆ ಯಾವುದೇ ಪ್ರಮಾಣ ಪತ್ರ ಮಾಡಿಸಲು ಹೋದರೂ ಅಧಿಕಾರಿಗಳಿಲ್ಲ ಎಂದು ನೆಪವೊಡ್ಡಿ ವಾಪಸ್ ಕಳಿಸಲಾಗುತ್ತಿದೆ. ನಗರಸಭೆಗೆ ಪ್ರಭಾರಿ ಪೌರಾಯುಕ್ತರಿದ್ದರೂ ಅವರಿಗೆ ಆಡಳಿತ ನಡೆಸಲು ಅಧಿಕಾರ ಇಲ್ಲ. ಹೀಗಾಗಿ ಯಾವುದೇ ಕೆಲಸಗಳು ಸಲೀಸಾಗಿ ಸಾಗದೆ ಇರುವುದರಿಂದ ನಗರ ನಿವಾಸಿಗಳು ಅಡಕತ್ತರಿಗೆ ಸಿಲುಕಿರುವುದು ಕಂಡು ಬಂದಿದೆ.
ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು ನಗರದಲ್ಲಿ ನಿತ್ಯ ಸಮರ್ಪಕ ಕಸ ವಿಲೇವಾರಿಯಾಗುತ್ತಿಲ್ಲ. ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ನಗರದ ಯಾವ ಬಡಾವಣೆಗೆ ಹೋದರೂ ಕಸದ ರಾಶಿ ಕಾಣಸಿಗುತ್ತದೆ. ರಸ್ತೆಗಳಲ್ಲಿ ಅಲ್ಲಿಲ್ಲಿ ಬಾಯ್ತೆರೆದು ಒಳ ಚರಂಡಿ ಗುಂಡಿಗಳು ರಾರಾಜಿಸುತ್ತಿವೆ. ಅಪಘಾತಗಳಂತೂ ನಿರಂತರವಾಗಿದ್ದು ಮುಂದೆ ಹೆಚ್ಚುವ ಸಾಧ್ಯತೆಯೂ ಇದೆ. ನಗರದಲ್ಲಿ ಕೊಚ್ಚೆ ಕೊಳಚೆ ಹೆಚ್ಚಿ ಕೆಲವು ಕಡೆ ಗಬ್ಬು ವಾಸನೆಯೂ ಇದೆ. ಇದರಿಂದ ಸಾಂಕ್ರಾಮಿಕ ಹೆಚ್ಚುವ ಸಾಧ್ಯತೆ ಇದೆ.

ಟೆಂಡರ್‌ನಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಪೌರಾಯುಕ್ತ ಅಮಾನತು
ನಗರಸಭೆಯ 2017-18ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ನಗರದ ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗೆ 150 ಎಲ್‌ಇಡಿ ಲೈಟ್ ಅಳವಡಿಸುವ ಟೆಂಡರ್‌ನಲ್ಲಿ ಅಕ್ರಮ ಎಸಗಿದ ಆರೋಪದ ಮೇರೆಗೆ ಪೌರಾಯುಕ್ತ ಡಾ.ಗುರುಲಿಂಗಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಜಾಗಕ್ಕೆ ಈಗ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೆಹಬೂಬ ಜಿಲಾನಿ ಅವರನ್ನು ಪ್ರಭಾರಿ ಪೌರಾಯುಕ್ತರನ್ನಾಗಿ ನಿಯೋಜಿಸಲಾಗಿದೆ. ಹಿಂದಿನ ಪೌರಾಯುಕ್ತರ ಅವ್ಯವಹಾರ ಸರಿಪಡಿಸಿ ನಗರಸಭೆಯನ್ನು ಸರಿ ದಾರಿಗೆ ತರುವುದು ಹೊಸ ಅಧಿಕಾರಿಗಳಿಗೆ ಸವಾಲಾಗಿದೆ.
ಭ್ರಷ್ಟಾಚಾರದ ಕೂಪವಾಗಿರುವ ನಗರಸಭೆಗೆ ಹೊಸ ಪೌರಾಯುಕ್ತರು ಬಂದರೆ ಅದು ನಮ್ಮನ್ನು ಸುತ್ತಿಕೊಳ್ಳದೆ ಎನ್ನುವ ಆತಂಕದಿಂದ ಹೊಸಬರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಗರಸಭೆ ಕಚೇರಿಯ ಸ್ಥಿತಿ ಹದಗೆಟ್ಟಿದೆ. ಆಸ್ತಿ ಖರೀದಿಯ ಮ್ಯುಟೇಶನ್ , ಈ ಖಾತೆ , ಜನನ ಮರಣ ಪ್ರಮಾಣ ಪತ್ರಗಳಿಗೆ ತಂಬ್ ನೀಡಲು ಪ್ರಭಾರಿ ಪೌರಾಯುಕ್ತರಿಗೆ ಅಧಿಕಾರವಿಲ್ಲ. ಹೀಗಾಗಿ ಸುಮಾರು 100ಕ್ಕೂ ಹೆಚ್ಚು ಅರ್ಜಿ ಹಾಕಿದ ನಿವಾಸಿಗಳಿಗೆ ನಿಗದಿತ ಅವಧಿಯಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ.
ಪೌರಕಾರ್ಮಿಕರ ವೇತನ ಬಾಕಿ
ಇಡೀ ದಿನ ಕಚೇರಿಯಲ್ಲಿ ಕಾಲ ಕಳೆದರೂ ಕೆಲಸಗಳಾಗುತ್ತಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ದೂರಾಗಿದೆ. ರಾಯಚೂರು ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿ ಮುಗಿದು ಮೂರು ತಿಂಗಳಾದರೂ ಇದುವರೆಗೆ ಚುನಾವಣೆ ನಡೆದಿಲ್ಲ . ಆಡಳಿತ ಅಧಿಕಾರಿಯಾಗಿ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಂಡಿದ್ದು , ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಇರುವ್ಯದರಿಂದ ನಗರಸಭೆ ವ್ಯಾಪ್ತಿಯಲ್ಲಿ 130ಕ್ಕೂ ಹೆಚ್ಚು ದಿನಗೂಲಿ ಪೌರಕಾರ್ಮಿಕರನ್ನು ನಿಯುಕ್ತಿಗೊಳಿಸಿ ಮೂರು ತಿಂಗಳಾದರೂ ವೇತನ ಪಾವತಿಸಿಲ್ಲ ಎಂದು ಕಾರ್ಮಿಕರು ಈಚೆಗೆ ನಗರಸಭೆ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲು ನಗರಸಭೆ ಆಡಳಿತ ಮುಂದಾಗಿಲ್ಲ. ನಗರದ ನಿವಾಸಿಗಳು ಮೂಲಸೌಲಭ್ಯ, ನಾನಾ ಸೌಲಭ್ಯ ಪಡೆಯಲು ತೀವ್ರ ತೊಂದರೆ ಎದುರಿಸುತ್ತಿದ್ದು ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕಿದೆ. ರಾಯಚೂರು ನಗರಸಭೆಗೆ ಪ್ರಭಾರಿ ಪೌರಾಯುಕ್ತರಾಗಿ ಮೆಹಬೂಬ ಜಿಲಾನಿ ಅವರನ್ನು ನೇಮಕ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ತಂಬ್ ತೆಗೆದುಕೊಂಡಿರುವುದಿಲ್ಲ. ಕೂಡಲೇ ಸರಿಪಡಿಸುವ ಕೆಲಸ ಮಾಡಲಾಗುವುದು. ನಗರದ ನಿವಾಸಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಚಂದ್ರಶೇಖರ ನಾಯಕ ಹೇಳಿದರು.












Click it and Unblock the Notifications