ಬಿಸಿಲ ನಾಡಿನಲ್ಲಿ ಕಮಲ ಅರಳಿಸುವ ಪ್ಲಾನ್: ಮಾ.24 ರಂದು BJP ಬೃಹತ್ ಸಮಾವೇಶ
ಚುನಾವಣೆ ನೀತಿ ಸಂಹಿತೆಯ ಆತಂಕದ ಮಧ್ಯೆ ತರಾತುರಿಯಲ್ಲಿ ಮಾರ್ಚ್24 ರಂದು ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಿದ್ದು ಸಿದ್ಧತೆಯಲ್ಲಿ ತೊಡಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಯಚೂರು, ಮಾರ್ಚ್ 18: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ರಾಜಕೀಯ ಪಕ್ಷಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದು, ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಪ್ರಚಾರ ಚುರುಕುಗೊಳಿಸಲು ಮುಂದಾಗಿದೆ. ಚುನಾವಣೆ ನೀತಿ ಸಂಹಿತೆಯ ಆತಂಕದ ಮಧ್ಯೆ ತರಾತುರಿಯಲ್ಲಿ ಮಾರ್ಚ್24 ರಂದು ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಿದ್ದು ಸಿದ್ಧತೆಯಲ್ಲಿ ತೊಡಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಚುನಾವಣೆಯಲ್ಲಿ ಸೋಲುಣಿಸಲು ಭರ್ಜರಿ ರಾಜಕೀಯ ದಾಳ ಉರುಳಿಸಲು ಮುಂದಾಗಿದೆ. ಕೇಂದ್ರ ನಾಯಕರನ್ನು ಜಿಲ್ಲೆಗೆ ಕರೆಯಿಸುವತ್ತ ಗಮನಹರಿಸಿದ್ದು ಮಾ.24 ರಂದು ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ಹಾಲಿ ಶಾಸಕರನ್ನು ಹೊರತುಪಡಿಸಿ ಇನ್ನುಳಿದೆಡೆ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ.

ಮಾರ್ಚ್ ತಿಂಗಳಾಂತ್ಯಕ್ಕೂ ಮೊದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ ಎನ್ನುವ ಆತಂಕದಲ್ಲಿ ನೀತಿಸಂಹಿತೆ ಜಾರಿಗೂ ಮೊದಲೇ ದೊಡ್ಡ ಮಟ್ಟದಲ್ಲಿ ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಕಾರ್ಯಕರ್ತರ ಸಮಾವೇಶ ಹಾಗೂ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುವ ಕಾರ್ಯಕ್ಕೆ ಬಿಜೆಪಿ ನಿರ್ಧರಿಸಿದೆ.
ಹೀಗಾಗಿ ಮಾ.24 ರಂದು ರಾಜ್ಯದ ಮುಖ್ಯಂತ್ರಿ ಬಸವರಾಜ ಬೊಮ್ಮಯಿ ಅವರು ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಬಿಜೆಪಿ ಪಕ್ಷದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶವನ್ನು ಕೋಟ್ಯಾಂತರ ರೂಪಾಯಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಹೆಸರಿನಲ್ಲಿ ಆಯೋಜಿಸಲಾಗುತ್ತದೆ.
ರಾಯಚೂರಿನಲ್ಲಿ ಕಳೆದ 300 ದಿನಗಳಿಗೂ ಹೆಚ್ಚಿನ ಅವಧಿ ಏಮ್ಸ್‌ಗಾಗಿ ನಡೆಸಲಾಗುತ್ತಿರುವ ಹೋರಾಟದಿಂದಾಗಿ ರಾಯಚೂರು ನಗರ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಪಕ್ಷದ ಬೃಹತ್ ಸಮಾವೇಶ ಇಲ್ಲವೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುವ ಕಾರ್ಯಕ್ರಮದ ಭವಿಷ್ಯ ಡೋಲಾಯಮಾನವಾಗಿದೆ. ದೇವದುರ್ಗದ ಗಬ್ಬೂರಿನಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಅವರು ಸಮಾವೇಶಕ್ಕೆ ಭರದ ಸಿದ್ಧತೆ ಕೈಗೊಳ್ಳಲು ಮುಂದಾಗಿದ್ದು ರಾಜಕೀಯ ಮತ್ತಷ್ಟು ರಂಗೇರುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಯಚೂರು ಗ್ರಾಮೀಣ ವ್ಯಾಪ್ತಿಯಲ್ಲಿ ಬಹಿರಂಗ ಸಮಾವೇಶ ನಡೆದಿದ್ದು ಬಿಟ್ಟರೆ ಅನಂತರದಲ್ಲಿ ಬಿಜೆಪಿ ಪಕ್ಷದ ದೊಡ್ಡ ಸಮಾವೇಶಗಳು ನಡೆದಿರಲಿಲ್ಲ.
ಇತ್ತೀಚಿಗೆ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಸೇರಿದಂತೆ ಪಕ್ಷದ ಇನ್ನಿತರೆ ನಾಯಕರು ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ರೋಡ್ ಶೋ ನಡೆಸುವ ಮೂಲಕ ಚುನಾವಣೆಯ ಕಾವೇರಿಸಿದ್ದಾರೆ. ಜಿಲ್ಲೆಯಲ್ಲಿ ರಾಯಚೂರು ನಗರ ಮತ್ತು ದೇವದುರ್ಗ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟಿಸುವ ಸವಾಲು ಪಕ್ಷಕ್ಕಿದ್ದು, ಹೀಗಾಗಿ ಭರ್ಜರಿ ಸಮಾವೇಶ ನಡೆಸಲಾಗುತ್ತಿದೆ
ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮೊದಲು ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸುವ ಉದ್ದೇಶದಿಂದ ಬಿಜೆಪಿ ಇದೀಗ ಭರ್ಜರಿ ತಂತ್ರಗಾರಿಕೆಗೆ ಮುಂದಾಗಿದೆ. ನೀತಿ ಸಂಹಿತೆ ಜಾರಿಗೂ ಮೊದಲೇ ಪ್ರಭಾವಿ ಕೇಂದ್ರ ನಾಯಕರನ್ನು ಜಿಲ್ಲೆಗೆ ಕರೆಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಗಬ್ಬೂರಿನಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ , ಸಚಿವ ಪ್ರಹ್ಲಾದ್ ಜೋಶಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ವಿಧಾನಸಭಾ ಚುನಾಚಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ.












Click it and Unblock the Notifications