ದೇಶದಲ್ಲಿ ಅನೇಕ ಪಾದಯಾತ್ರೆ ನಡೆದಿವೆ: ಆದರೆ ಭಾರತ್ ಜೋಡೊ ಐತಿಹಾಸಿಕ- ಸಿದ್ದರಾಮಯ್ಯ
ರಾಯಚೂರು, ಅಕ್ಟೋಬರ್, 10: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬರೀ ದ್ವೇಷದ ರಾಜಕಾರಣವೇ ಮುಂದುವರೆದಿದೆ ಎಂದು ಸಿದ್ದರಾಮಯ್ಯ ರಾಯಚೂರಿನಲ್ಲಿ ಗುಡುಗಿದ್ದಾರೆ. ಬೆಲೆ ಏರಿಕೆ, ರೈತರ ಸಮಸ್ಯೆ ಸೇರಿದಂತೆ ಇತರೆ ಜನ ಸಮುದಾಯ ಸಂಕಷ್ಟಕ್ಕೆ ಗುರಿಯಾಗುವ ಆರ್ಥಿಕ ನೀತಿಗಳ ವಿರುದ್ಧ ಭಾರತ್ ಜೋಡೋ ಯಾತ್ರೆಯನ್ನು ಕೊಗೊಳ್ಳಲಾಗಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ಬಿಜೆಪಿಯಲ್ಲಿ ನಡುಕ ಹುಟ್ಟುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಯರಮರಸ್ ದಂಡು ಪ್ರವಾಸ ಮಂದಿರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಐತಿಹಾಸಿಕ ಪಾದಯಾತ್ರೆ ಚುನಾವಣೆ ಮತ್ತು ರಾಜಕೀಯ ಉದ್ದೇಶದಿಂದ ಕೂಡಿಲ್ಲ. "ದೇಶದಲ್ಲಿ ಹೆಚ್ಚುತ್ತಿರುವ ಬಿಜೆಪಿಯ ಅರಾಜಕತೆ, ರೈತರು, ದೀನ ದಲಿತರು, ಹಿಂದುಳಿದ ಅಲ್ಪಸಂಖ್ಯಾತ ಜನ ಜೀವನದ ವಾಸ್ತವತೆ ತಿಳಿಯಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಅನೇಕ ಬಾರಿ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ. ಆದರೆ ರಾಹುಲ್ ಗಾಂಧಿ ಅವರ ಪಾದಯಾತ್ರೆ ಐತಿಹಾಸಿಕ ಆಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3750 ಕಿಲೋ ಮೀಟರ್ ಯಾತ್ರೆ ಐತಿಹಾಸಿಕವಾಗಿದೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಮೂಲಕ ಬಿಜೆಪಿ ತನ್ನ ಆಡಳಿತ ಅವಧಿಯ ಸಮಸ್ಯೆಗಳನ್ನು ಮುಚ್ಚಿಡುವ ಕುತಂತ್ರದ ಭಾಗವಾಗಿದೆ. ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ." ಎಂದು ಹರಿಹಾಯ್ದರು.

ಬೆಲೆ ಏರಿಕೆ ನಿಯಂತ್ರಿಸುವಲ್ಲಿಯೂ ಬಿಜೆಪಿ ವಿಫಲ
ಯುವಕರಿಗೆ ಉದ್ಯೋಗ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿಯೂ ವಿಫಲ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳು ಹಾಗೆಯೇ ಉಳಿದಿವೆ. ಇದನ್ನು ಮುಚ್ಚಿಕೊಳ್ಳಲು ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದರಿಂದ ರೈತರು, ದಲಿತರು, ಹಿಂದುಳಿದ, ಅಲ್ಪಸಂಖ್ಯಾತ ಜನ ಭಯದಲ್ಲಿ ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ದೇಶದಲ್ಲಿ ಜನ ಜೀವನದ ನೈಜ್ಯತೆ ತಿಳಿಯಲು ಸೆಪ್ಟೆಂಬರ್ 7ರಿಂದ ಕಾಂಗ್ರೆಸ್‌ನಿಂದ ಪಾದಯಾತ್ರೆ ಆರಂಭಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.

ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಪರದಾಟ
ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ 46 ರೂಪಾಯಿ ಇದ್ದ ಡಿಸೇಲ್ ಇಂದು 87ರಿಂದ 90 ರೂಪಾಯಿ ಹೆಚ್ಚಳವಾಗಿದೆ ಎಂದು ಕಿಡಿಕಾರಿದರು. 414 ರೂಪಾಯಿ ಇದ್ದ ಗ್ಯಾಸ್ ಇಂದು 1076 ರೂಪಾಯಿ ಗಡಿ ಮುಟ್ಟಿದೆ. ಪೆಟ್ರೋಲ್ ಬೆಲೆಯಲ್ಲೂ ಭಾರಿ ಹೆಚ್ಚಳವಾಗಿದೆ. ಅಡುಗೆ ಎಣ್ಣೆ, ಗೊಬ್ಬರ, ಕಬ್ಬಿಣ ಹೀಗೆ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಪರಿಣಾಮ ಜನ ಸಾಮಾನ್ಯರು ಪರದಾಡುವಂತೆ ಆಗಿದೆ. ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ವಿಧಿಸುವ ಮೂಲಕ ಬರೆ ಎಳೆದಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುಂಚೆಯೇ ದೇಶದ ಒಟ್ಟು ಸಾಲ 53 ಲಕ್ಷ ಕೋಟಿ ಇತ್ತು. ಆದರೆ ಕೇವಲ 9 ವರ್ಷಗಳಲ್ಲಿ ದೇಶದ ಸಾಲ 1.52 ಲಕ್ಷ ಕೋಟಿ ಆಗಿದೆ. ಕೇವಲ 8 ವರ್ಷಗಳಲ್ಲಿ ಮೋದಿ ಸರ್ಕಾರ 100 ಲಕ್ಷ ಕೋಟಿ ಸಾಲ ಮಾಡಿರುವುದು ಇವರ ಆರ್ಥಿಕ ನಿರ್ವಹಣೆಯ ವೈಫಲ್ಯ ಎತ್ತಿ ತೋರಿಸುತ್ತದೆ ಎಂದರು.

ಪ್ರಧಾನಿಯವರು ಬರೀ ಸುಳ್ಳು ಹೇಳುತ್ತಿದ್ದಾರೆ
ರಾಜ್ಯ ಮತ್ತು ದೇಶದಲ್ಲಿ ಭ್ರಷ್ಟಾಚಾರ ವ್ಯಾಪಾಕವಾಗಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಶೇಕಡಾ 40ರಷ್ಟು ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದ, ಇದಕ್ಕಿಂತ ಮತ್ತೊಂದು ನಿದರ್ಶನವಿಲ್ಲ. ಇಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ, ಪ್ರಧಾನಿ ಮೋದಿ ಅವರು ಸಾರ್ವಜನಿಕರ ಮುಂದೆ ನಾನು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಗುತ್ತಿಗೆದಾರರು ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದನ್ನು ಪ್ರಧಾನಿ ಮೋದಿ ಅವರು ಸಿಬಿಐ ತನಿಖೆಗೆ ವಹಿಸಲಿಲ್ಲ ಏಕೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಿಂದ ಅವ್ಯವಹಾರಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರೆ, ಮುಖ್ಯಮಂತ್ರಿಗಳು ದಾಖಲೆ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ನನ್ನ ಅಧಿಕಾರವಧಿಯಲ್ಲಿ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿಕೊಟ್ಟಿದ್ದೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಸಿಬಿಐ ತನಿಖೆಗೆ ಶಿಫಾರಸ್ಸು ಮಾಡುವ ಮೂಲಕ ಪ್ರಾಮಾಣಿಕತೆ ಪ್ರದರ್ಶಿಸಲಾಗಿದೆ. ಪರೇಶ್ ಮೆಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದು ನಾನು. ಇದು ಕೊಲೆಯಲ್ಲ, ಸಹಜ ಸಾವು ಎಂದು ಸಿಬಿಐ ವರದಿ ನೀಡಿದೆ. ಸಿಬಿಐ ಈ ವರದಿ ನೀಡಿದ ನಂತರ ರಾಜ್ಯ ಬಿಜೆಪಿಯ ಮುಖಂಡರು ಹೊಸ ನಾಟಕ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಎನ್.ಎಸ್.ಬೋಸರಾಜು, ಬಿ.ವಿ.ನಾಯಕ, ದದ್ದಲ್ ಬಸವನಗೌಡ, ಹೂಲಗೇರಿ, ಬಸವನಗೌಡ ತುರ್ವಿಹಾಳ, ಹಂಪನಗೌಡ ಬಾದರ್ಲಿ, ಹಂಪಯ್ಯ ಸಾಹುಕಾರ, ಎ.ವಸಂತಕುಮಾರ, ನಾಗವೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications