ಆಗಸ್ಟ್ ತಿಂಗಳ ಪಡಿತರ ಪಡೆಯುವವರಿಗೆ ಮಹತ್ವದ ಸೂಚನೆ
ರಾಯಚೂರು, ಆಗಸ್ಟ್ 11; ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರಾಯಚೂರು ಆಗಸ್ಟ್ ತಿಂಗಳ ಪಡಿತರ ಪಡೆಯುವವರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಪಡಿತರ ಚೀಟಿಗಳಲ್ಲಿ ಎಸ್‌ಸಿ/ ಎಸ್‌ಟಿ ಕುಟುಂಬದ ಮಾಹಿತಿಯನ್ನು ನವೀಕರಿಸುವ ಬಗ್ಗೆ ಈ ಸೂಚನೆ ನೀಡಲಾಗಿದೆ.
ಉಪ ನಿರ್ದೇಶಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರಾಯಚೂರು ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗೆ ಈ ಕುರಿತು ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಮಾನ್ಯ ಆಯುಕ್ತರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ.

ಈ ಪತ್ರ ಪಡಿತರ ಚೀಟಿಗಳಲ್ಲಿ ಎಸ್‌ಸಿ/ ಎಸ್‌ಟಿ ಕುಟುಂಬದ ಮಾಹಿತಿಯನ್ನು ನವೀಕರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಪಡೆಯುವಂತೆ ಸೂಕ್ತ ನಿರ್ದೇಶನ ನೀಡಿ ಅಗತ್ಯ ಕ್ರಮವಹಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಾನ್ಯ ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಪತ್ರದಂತೆ ಜಿಲ್ಲೆಯಲ್ಲಿ ಎಸ್‌ಸಿ/ ಎಸ್‌ಟಿ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ ಎಂದು ವಿವರಣೆ ನೀಡಲಾಗಿದೆ.
ಜಾತಿ ಪ್ರಮಾಣ ಪತ್ರ ಸಲ್ಲಿಸಿ; ಈ ಪತ್ರದ ಸೂಚನೆಯಂತೆ ಆಗಸ್ಟ್ 2023ರ ತಿಂಗಳಿನಲ್ಲಿ ಪಡಿತರ ಪಡೆಯುವ ಸಂದರ್ಭದಲ್ಲಿ ಪಡಿತರ ಚೀಟಿದಾರರು ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯೊಂದಿಗೆ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ AJSK (ಅಟಲ್ ಜನ ಸ್ನೇಹಿ ಕೇಂದ್ರ)/ ತಹಶೀಲ್ದಾರ್ ಕಛೇರಿಯಿಂದ ಪಡೆದ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವಂತೆ ಸೂಚಿಸಲಾಗಿದೆ.
ಆಯುಕ್ತರ ಪತ್ರದ ಪ್ರತಿಯಲ್ಲಿ ಸೂಚಿಸಿರುವಂತೆ ಆಗಸ್ಟ್-2023ರ ಮಾಹೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಎಸ್‌ಸಿ/ ಎಸ್‌ಟಿ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಆದ್ದರಿಂದ ತಹಶೀಲ್ದಾರ್ ತಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳಿಗೆ ಪಡಿತರ ಚೀಟಿದಾರರಿಂದ ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯೊಂದಿಗೆ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ AJSK (ಅಟಲ್ ಜನ ಸ್ನೇಹಿ ಕೇಂದ್ರ)/ ತಹಶೀಲ್ದಾರ್ ಕಛೇರಿಯಿಂದ ಪಡೆದ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಪಡೆಯುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಸದ್ಯಕ್ಕಿಲ್ಲ ಹೊಸ ರೇಷನ್ ಕಾರ್ಡ್; ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ ಹೇಳಿದ್ದರು. ಆದರೆ ಈಗ ಇಲಾಖೆಯ ಆದೇಶದಂತೆ ಹೊಸ ಕಾರ್ಡ್‌ಗಳನ್ನು ಸದ್ಯಕ್ಕೆ ನೀಡುವುದಿಲ್ಲ.
ಆಯುಕ್ತರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರು ಪಡಿತರ ಚೀಟಿಯಲ್ಲಿನ ತಿದ್ದುಪಡಿ/ ಸೇರ್ಪಡೆ ಮಾಡುವ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.
ಪ್ರಸ್ತುತ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ. ಮುಂದುವರೆದು, ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ತಮಗೆ ತಿಳಿಸಲು ನಿರ್ದೇಶಿಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.
2023ರ ಮಾರ್ಚ್‌ನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೆ ಬಂದಿತು. ಆಗ ಬಿಪಿಎಲ್ ಕಾರ್ಡ್ಗೆ ಅರ್ಜಿ ಸ್ವೀಕರಿಸುವುದನ್ನು ಆಹಾರ ಇಲಾಖೆ ಸ್ಥಗಿತಗೊಳಿಸಿತು. ಬಳಿಕ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಹ ಇನ್ನೂ ಹೊಸ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿಲ್ಲ.












Click it and Unblock the Notifications