ಮಾನ್ವಿ: ಅಪರೂಪದ ಹುಲಿಬೇಟೆಯ ವೀರಗಲ್ಲುಗಳು ಪತ್ತೆ, ಏನಿದರ ವಿಶೇಷತೆ?
ರಾಯಚೂರು ಆಗಸ್ಟ್ 09: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಅಪರೂಪದ ಹುಲಿಬೇಟೆಯ ವೀರಗಲ್ಲುಗಳನ್ನು ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಪತ್ತೆ ಹಚ್ಚಿದ್ದಾರೆ.
ಚೀಕಲಪರ್ವಿ ಗ್ರಾಮದ ಗೌಡರ ಮನೆ ಬಳಿಯ ಕಟ್ಟೆಯ ಮೇಲೆ ಗ್ರಾಮಸ್ಥರು ಒಟ್ಟು ಮೂರು ವೀರಗಲ್ಲುಗಳನ್ನು ಜೋಡಿಸಿಟ್ಟು ನೂರಾರು ವರ್ಷಗಳಿಂದ ಸಂರಕ್ಷಿಸಿದ್ದಾರೆ. ಈ ಮೂರು ವೀರಗಲ್ಲುಗಳು ಹುಲಿ ಬೇಟೆಯಲ್ಲಿ ವೀರಮರಣ ಹೊಂದಿದ ಯೋಧನ ಚಿತ್ರಣವನ್ನು ವಿವರಿಸುತ್ತವೆ.

ಇವುಗಳ ಪೈಕಿ ಒಂದು ವೀರಗಲ್ಲು ಕೈಯಲ್ಲಿ ಗುರಾಣಿ ಮತ್ತು ಖಡ್ಗವನ್ನು ಹಿಡಿದ ವೀರ, ಹುಲಿಯ ಮೇಲೆ ಬೇಟೆ ನಾಯಿಯೊಂದು ದಾಳಿ ಮಾಡುತ್ತಿರುವುದು ಹಾಗೂ ಪಾರಿವಾಳದ ಚಿತ್ರಗಳನ್ನು ಹೊಂದಿದೆ. ಇದು ಯೋಧ ಬೇಟೆಗೆ ಹೊರಟಾಗಿನ ಚಿತ್ರಣವನ್ನು ವಿವರಿಸುತ್ತದೆ.
ಇನ್ನೊಂದು ವೀರಗಲ್ಲಿನಲ್ಲಿ ಹುಲಿ ಬಾಯಿ ತೆರೆದು ಬಾಲವನ್ನು ಮೇಲಕ್ಕೆ ಎತ್ತಿ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು, ಆ ವ್ಯಕ್ತಿಯು ಹುಲಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಶೌರ್ಯದಿಂದ ಹುಲಿಗೆ ಭರ್ಜಿಯಿಂದ ಇರಿಯುತ್ತಿರುವ ಸನ್ನಿವೇಶ ಹೊಂದಿದೆ. ಹುಲಿಯೊಂದಿಗೆ ನಡೆದ ಕಾಳಗದಲ್ಲಿ ಆ ವ್ಯಕ್ತಿಯು ವೀರಮರಣ ಹೊಂದಿರುವುದನ್ನು ಸೂಚಿಸುತ್ತದೆ. ವೀರಗಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರರ ಚಿತ್ರಗಳನ್ನು ಚಿತ್ರಿಸಿದ್ದಾರೆ ಎನ್ನುವುದು ಇತಿಹಾಸ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಅವರ ಅಭಿಪ್ರಾಯವಾಗಿದೆ.
ಚೀಕಲಪರ್ವಿ ಗ್ರಾಮದಲ್ಲಿರುವ ವೀರಗಲ್ಲುಗಳು ಕಣ ಶಿಲೆಯಲ್ಲಿದ್ದು ಕ್ರಿ.ಶ 17-18ನೇ ಶತಮಾನಕ್ಕೆ ಸೇರಿದ್ದಾಗಿವೆ. ಮೂರನೇ ವೀರಗಲ್ಲು ವೀರನ ಸುಂದರ ಕೇಶ ವಿನ್ಯಾಸ ಹಾಗೂ ವಸ್ತ್ರ ವಿನ್ಯಾಸ, ತೋಳುಗಳಿಗೆ ಕಟ್ಟಿರುವ ಅಭರಣಗಳನ್ನು ತೋರುತ್ತದೆ. ವೀರನ ಪಕ್ಕ ಮಹಿಳೆಯೊಬ್ಬರು ಅಮೃತ ಕಳಶ ಹಿಡಿದು ನಿಂತಿರುವುದು, ಜಾನುವಾರುಗಳ ರಕ್ಷಣೆಗಾಗಿ ಹುಲಿಯೊಂದಿಗಿನ ಕಾಳಗದಲ್ಲಿ ವೀರನು ಮರಣ ಹೊಂದಿದ್ದು, ವೀರನ ಜೊತೆಗೆ ಸತಿಯು ಕೂಡ ಸಹಗಮನ ಹೊಂದಿರುವುದನ್ನು ತಿಳಿಸುತ್ತದೆ. ಈ ವೀರಗಲ್ಲು ಹುಲಿ ಬೇಟೆಯ ವೀರ ಮಹಾಸತಿ ಶಿಲ್ಪ ಎಂದು ತಿಳಿಸಿದ್ದಾರೆ.
ಚೀಕಲಪರ್ವಿ ಗ್ರಾಮದ ಹತ್ತಿರ ತುಂಗಭದ್ರಾ ನದಿ ಇರುವುದರಿಂದ ಪುರಾತನ ಕಾಲದಲ್ಲಿ ಈ ಭಾಗದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಇದ್ದಿರಬಹುದು. ಹುಲಿಗಳು ಜಿಂಕೆ, ಚಿಗರೆಯಂತಹ ಪ್ರಾಣಿಗಳಿರುವ ಕಡೆ ಮಾತ್ರ ವಾಸ ಮಾಡುವುದರಿಂದ ಈ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ವಾಸವಾಗಿದ್ದವು ಎನ್ನುವುದಕ್ಕೆ ಹುಲಿ ಬೇಟೆಯ ಈ ವೀರಗಲ್ಲುಗಳು ಸಾಕ್ಷಿಯಾಗಿವೆ.
ಗ್ರಾಮದ ಕೆಲವು ಕುಟುಂಬಗಳು ಹಿಂದಿನ ತಲೆಮಾರುಗಳಿಂದ ಶಕ್ತಿ ದೇವತೆ, ತಮ್ಮ ಮನೆ ದೇವರಾಗಿ ಈ ವೀರಗಲ್ಲುಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಕಾರಣ ಇಂದಿಗೂ ಈ ವೀರಗಲ್ಲುಗಳು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ. ಇತಿಹಾಸ ಅಧ್ಯಯನಕ್ಕೆ ಪೂರಕವಾಗಿರುವ ಪ್ರಾಚೀನ ಕಾಲದ ಈ ವೀರಗಲ್ಲುಗಳ ಕುರಿತು ವಿಶೇಷ ಅಧ್ಯಯನ ಹಾಗೂ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.












Click it and Unblock the Notifications