ಕೌಟುಂಬಿಕ ಕಲಹ: ಸಿಟ್ಟಿನಲ್ಲಿ ಮಕ್ಕಳನ್ನು ಕೊಂದು ತಾನೂ ಸಾವಿಗೆ ಶರಣಾದ ತಾಯಿ
ರಾಯಚೂರು, ಆಗಸ್ಟ್ 11: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದು ತಾಯಿಯೊಬ್ಬಳು ಹೆತ್ತ ಮಕ್ಕಳನ್ನೇ ಬಾವಿಗೆ ನೂಕಿ ಕೊಂದು ಬಳಿಕ ತಾನೂ ಬಾವಿಗೆ ಹಾರಿ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ತಾಯಿ ಮಕ್ಕಳ ಸಾವಿನ ದುರ್ಘಟನೆ ನಡೆದಿದೆ. ಮುದಗಲ್ ಪಟ್ಟಣದ ಮೇಗಳಪೇಟೆ ನಿವಾಸಿ ಚೌಡಮ್ಮ (34) ಹಾಗೂ ಆಕೆಯ ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬೇಸತ್ತಿದ್ದ ಮಹಿಳೆ ಮನೆಯಲ್ಲಿ ಜಗಳ ಮಾಡಿಕೊಂಡು ಮಕ್ಕಳನ್ನು ಕರೆದುಕೊಂಡು ಹೊಲದತ್ತ ಹೋಗಿದ್ದಾಳೆ. ಇನ್ನು ಸಿಟ್ಟಿನಲ್ಲಿ ಹೋಗಿದ್ದ ಹೆಂಡತಿ ಮನೆಗೆ ವಾಪಸ್ ಬರುತ್ತಾಳೆ ಎಂದು ಗಂಡನೂ ಸುಮ್ಮನಾಗಿದ್ದಾನೆ. ಆದರೆ, ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋದ ಮಹಿಳೆ ನೇರವಾಗಿ ಊರಿನ ಹೊರಭಾಗದಲ್ಲಿದ್ದ ಬಾವಿಯ ಬಳಿ ಕರೆದುಕೊಂಡು ಹೋಗಿದ್ದಾಳೆ.
ಬಳಿಕ ಬಾವಿಯ ಪಕ್ಕದಲ್ಲಿದ್ದ ಬೇವಿನ ಮರದ ಬಳಿ ಮಕ್ಕಳನ್ನು ಕೂರಿಸಿಕೊಂಡು ಅತ್ತು, ಮನೆಯವರ ಕಾಟ ಸಹಿಸಲು ಆಗುತ್ತಿಲ್ಲ ಎಂದು ಸಾಯಲು ನಿರ್ಧರಿಸಿದ್ದಾಳೆ ಎನ್ನಲಾಗಿದೆ. ಮಕ್ಕಳು ನೀರಿನಲ್ಲಿ ಮುಳುಗಿದ ನಂತರ ತಾನೂ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಮನೆಯಿಂದ ಜಗಳ ಮಾಡಿಕೊಂಡು ಮಕ್ಕಳನ್ನು ಕರೆದುಕೊಂಡು ಹೋದ ಪತ್ನಿ ಎಷ್ಟು ಸಮಯವಾದರೂ ಬರಲಿಲ್ಲ ಎಂದು ಗಂಡ ಮತ್ತು ಆಕೆಯ ಇತರೆ ಕುಟುಂಬ ಸದಸ್ಯರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ಸಿಗದಿದ್ದಾಗ ನೆಂಟರಿಷ್ಟರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಂತರ, ಸಾವಿನ ಬಗ್ಗೆ ಅನುಮಾನ ಬಂದು ಎಲ್ಲ ಬಾವಿಗಳ ಬಳಿ ಹೋಗಿ ನೋಡಿದ್ದಾರೆ.
ಬಳಿಕ ಗ್ರಾಮದ ಹೊರಭಾಗದಲ್ಲಿದ್ದ ಬಾವಿಯ ಬಳಿ ಹೋಗಿ ನೋಡಿದಾಗ ಚಪ್ಪಲಿಗಳು ಪತ್ತೆಯಾಗಿವೆ. ಬಾವಿಗೆ ಇಳಿದು ನೋಡಿದಾಗ ಮೂವರ ಹೆಣಗಳು ಇರುವುದು ಪತ್ತೆಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನು ಸಾವಿನ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕವಾಗಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸ್ ತನಿಖೆ ನಂತರ ಸತ್ಯಾಸತ್ಯತೆ ಹೊರಬೀಳಲಿದೆ.












Click it and Unblock the Notifications