ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಮಗು ಪವಾಡಸದೃಶ ಪಾರು
ಪುಣೆ, ಫೆಬ್ರವರಿ 21 : ಈ ಘಟನೆಯನ್ನು ಪವಾಡವೆಂದೇ ಕರೆಯಬಹುದು. ಏಕೆಂದರೆ, ಸತತ 16 ಗಂಟೆಗಳ ಪ್ರಯತ್ನದ ನಂತರ, ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ.
ಪುಣೆ ಜಿಲ್ಲೆಯ ತೋರಂಡಾಳೆ ಗ್ರಾಮದಲ್ಲಿ ರವಿ ಪಂಡಿತ್ ಭಿಲ್ ಎಂಬ ಬಾಲಕ 200 ಅಡಿ ಕೊರೆಯಲಾಗಿದ್ದ ಬೋರ್ವೆಲ್ ಗೆ ಬುಧವಾರ ಬಿದ್ದಿದ್ದ. ಆಟವಾಡಲು ಹೋಗಿದ್ದಾಗ ಬೋರ್ವೆಲ್ ನಲ್ಲಿ ಬಿದ್ದಿದ್ದ ಬಾಲಕ 10 ಅಡಿ ಆಳದಲ್ಲಿ ಸಿಲುಕಿದ್ದ.
ಈ ಘಟನೆ ಬುಧವಾರ ಸಂಜೆ 4.30ರ ಸುಮಾರಿಗೆ ಘಟಿಸಿತ್ತು. ಕಾರ್ಮಿಕನಾಗಿರುವ ತಂದೆಯ ಬಳಿ ಆಟವಾಡುತ್ತಿದ್ದ ರವಿ ಇದ್ದಕ್ಕಿದ್ದಂತೆ ತೆರೆದ ಬೋರ್ವೆಲ್ ನಲ್ಲಿ ಬಿದ್ದಿದ್ದ. ಆ ಸಮಯದಲ್ಲಿ ಆತನ ತಂದೆ ರಸ್ತೆ ರಿಪೇರಿಯಲ್ಲಿ ತೊಡಗಿದ್ದರು.

ಮಗುವಿನ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಸಿಬ್ಬಂದಿಯ ಮೇಲೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್‌ಡಿಆರ್‌ಎಫ್) ಸಿಬ್ಬಂದಿಗಳು ಸತತ 16 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ.
ನಾಮದೇವ್ ಜಾಧವ್ ಎಂಬುವವರಿಗೆ ಸೇರಿದ ಫಾರ್ಮ್ ನಲ್ಲಿ ರವಿ ಭಿಲ್ ಬಿದ್ದಿದ್ದ. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಗುರುವಾರ ಬೆಳಿಗ್ಗೆ 9.30ರ ಸುಮಾರಿಗೆ ಮಗುವನ್ನು ಸುರಕ್ಷಿತವಾಗಿ ಆಚೆ ಕರೆದುಕೊಂಡು ಬಂದರು. ರವಿ ಜೀವಂತವಾಗಿದ್ದು ತಿಳಿಯುತ್ತಿದ್ದಂತೆ ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಮಗುವಿಗೆ ಯಾವುದೇ ಗಾಯವಾಗದಂತೆ ಹೊರತೆಗೆಯುವುದು ಅತ್ಯಂತರ ಕ್ಲಿಷ್ಟಕರ ಕೆಲಸವಾಗಿತ್ತು ಎಂದು ಎನ್ಡಿಎಲ್ಎಫ್ ನ ಅಧಿಕಾರಿ ತಿಳಿಸಿದ್ದಾರೆ. ಬೋರ್ವೆಲ್ ಗೆ ಸಮಾನಾಂತರವಾಗಿ ನೆಲವನ್ನು ಅಗೆದು ಮಗುವನ್ನು ಹೊರತೆಗೆಯಲಾಯಿತು.
NDRF team has successfully rescued the child from the borewell after a difficult operation of 13 hours. Kudos to your efforts, @NDRFHQ @mid_day pic.twitter.com/8AQ3XRQRbq
— Diwakar Sharma (@DiwakarSharmaa) February 21, 2019
ಗುಟೂಂರಿನಲ್ಲೂ ಮಗುವಿನ ರಕ್ಷಣೆ : ಒಂದೂಮುಕ್ಕಾಲು ವರ್ಷಗಳ ಹಿಂದೆ ಗುಂಟೂರಿನಲ್ಲಿಯೂ ಎರಡು ವರ್ಷದ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಲಾಗಿತ್ತು.
ಝಂಜರವಾಡದ ಘಟನೆ : ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಕಾವೇರಿ ಎಂಬ ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ರಕ್ಷಣಾ ಸಿಬ್ಬಂದಿ ಸತತ 54 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದರೂ ಬದುಕುವ ಅದೃಷ್ಟ ಕಾವೇರಿಗೆ ಇರಲಿಲ್ಲ.












Click it and Unblock the Notifications