23 ವರ್ಷದ ವೈದ್ಯೆಯ ಬಲಿ ತೆಗೆದುಕೊಂಡ ರಸ್ತೆ ಹೊಂಡ
ಥಾಣೆ, ಅಕ್ಟೋಬರ್ 10: ಚೆನ್ನೈನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ಬಿದ್ದು ಸ್ಕೂಟರ್‌ನಲ್ಲಿ ಸಾಗುತ್ತಿದ್ದ 23 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶುಭಶ್ರೀ ದುರ್ಮರಣ ಹೊಂದಿದ ಘಟನೆ ಇನ್ನೂ ಹಸಿಯಾಗಿ ಇರುವಾಗಲೇ ಮಹಾರಾಷ್ಟ್ರದ ಥಾಣೆಯಲ್ಲಿ ಮತ್ತೊಂದು ಹೃದಯ ವಿದ್ರಾವಕ ಅಪಘಾತ ಸಂಭವಿಸಿದೆ.
23 ವರ್ಷದ ವೈದ್ಯೆಯೊಬ್ಬರು ರಸ್ತೆ ಹೊಂಡದಿಂದಾಗಿ ಮೃತಪಟ್ಟಿದ್ದಾರೆ. ಹೊಂಡಕ್ಕೆ ಡಿಕ್ಕಿ ಹೊಡೆದು ವೈದ್ಯೆ ಕೆಳಗೆ ಬಿದ್ದಾಗ ಆಕೆಯ ಮೇಲೆ ಟ್ರಕ್ ಹರಿದು ಈ ಸಾವು ಸಂಭವಿಸಿದೆ.
ವೈದ್ಯೆ ನೇಹಾ ಶೇಖ್ ಬುಧವಾರ ರಾತ್ರಿ 10.30ರ ವೇಳೆಗೆ ತಮ್ಮ ಸಹೋದರನೊಂದಿಗೆ ಭಿವಾಂಡಿಯಿಂದ ತಮ್ಮ ಮನೆಗೆ ತೆರಳುತ್ತಿದ್ದರು. ಸಹೋದರ ಗಾಡಿ ಓಡಿಸುತ್ತಿದ್ದರೆ ನೇಹಾ ಹಿಂದೆ ಕುಳಿತಿದ್ದರು. ಆಗ ಸ್ಕೂಟರ್ ರಸ್ತೆಯಲ್ಲಿ ಹೊಂಡದೊಳಗೆ ಇಳಿದಾಗ ಆಯ ತಪ್ಪಿ ನೇಹಾ ನೆಲಕ್ಕೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಹಿಂದಿನಿಂದ ಬಂದ ಟ್ರಕ್ ಅವರ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದ ನೇಹಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನೇಹಾ ಅವರ ವಿವಾಹ ನಿಶ್ಚಯವಾಗಿದ್ದು, ನವೆಂಬರ್ 7ರಂದು ಅವರು ಹಸೆಮಣೆ ಏರಬೇಕಿತ್ತು. ಮದುವೆಯ ಶಾಪಿಂಗ್‌ಗಾಗಿ ಅವರು ಸಹೋದರನೊಂದಿಗೆ ತೆರಳಿದ್ದರು.
ಭಿವಾಂಡಿ-ವಾಡಾ-ಮನೋರ್ ಹೆದ್ದಾರಿಯ ಡುಗಾ ಜಂಕ್ಷನ್ ಸಮೀಪ ಈ ಅಪಘಾತ ಸಂಭವಿಸಿದೆ. ಟ್ರಕ್ ಚಾಲಜನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ಗಣೇಶಪುರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿ ಪ್ರಕರಣ ದಾಖಲಾಗಿದೆ ಎಂದು ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಸಾಗ್ಡೆ ತಿಳಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಶ್ರಮಜೀವಿ ಯುವ ಸಂಘಟನೆಯ ಕಾರ್ಯಕರ್ತರು ಹೆದ್ದಾರಿಯ ಟೋಲ್ ಬೂತ್ ಸಮೀಪ ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು.
'ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ನಿಜಕ್ಕೂ ಪ್ರಕರಣ ದಾಖಲಾಗಬೇಕಿದ್ದು ಲೋಕೋಪಯೋಗಿ ಅಧಿಕಾರಿಗಳು ಅಥವಾ ರಸ್ತೆಯ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆಗಾರಿಕೆ ವಹಿಸಿಕೊಂಡಿರುವ ಸಂಸ್ಥೆಯ ಮೇಲೆ' ಎಂದು ಯುವ ಸಂಘಟನೆಯ ಅಧ್ಯಕ್ಷ ಪ್ರಮೋದ್ ಪವಾರ್ ಹೇಳಿದರು.












Click it and Unblock the Notifications