ಮದ್ಯಪಾನ ಮಾಡುವವರು ಭಾರತೀಯರಲ್ಲ, ಪಾಪಿಗಳು ಎಂದ ಬಿಹಾರ ಸಿಎಂ!
ಪಾಟ್ನಾ, ಮಾರ್ಚ್ 31: ಬಿಹಾರದಲ್ಲಿ ಪದೇ ಪದೇ ನಡೆಯುತ್ತಿರುವ ದುರ್ಘಟನೆಗಳನ್ನು ಬೊಟ್ಟು ಮಾಡಿ ಮದ್ಯಪಾನ ಮಾಡುವವರ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮದ್ಯಪಾನ ಯಾರು ಮಾಡುತ್ತಾರೋ ಅವರು ಭಾರತೀಯರಲ್ಲ, ಅವರು ಮಹಾಪಾಪಿಗಳು ಎಂದು ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.
ಬಿಹಾರದಲ್ಲಿ ಪದೇ ಪದೇ ದುರಂತಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಬಿಹಾರ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಕಾರಿ ಮದ್ಯ ಸೇವಿಸಿ ಸಾಯುವವರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು ಮತ್ತು ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿ ಮತ್ತು ಮಹಾ ಅಯೋಗ್ಯ ವ್ಯಕ್ತಿ ಎಂದು ಬಿಹಾರ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ. "ನಾನು ಈ ಜನರನ್ನು ಭಾರತೀಯರೆಂದು ಪರಿಗಣಿಸುವುದಿಲ್ಲ," ಎಂದು ಕೂಡಾ ತಿಳಿಸಿದ್ದಾರೆ.

ಮದ್ಯ ಸೇವನೆಯಿಂದ ಜೀವಕ್ಕೆ ಅಪಾಯವಾದರೆ ಸರ್ಕಾರ ಹೊಣೆಯಲ್ಲ ಎಂದ ಸಿಎಂ
"ಮದ್ಯ ಸೇವನೆ ಹಾನಿಕಾರಕ ಎಂದು ತಿಳಿದಿದ್ದರೂ ಜನರು ಈ ಮದ್ಯವನ್ನು ಸೇವನೆ ಮಾಡುತ್ತಾರೆ. ಹೀಗಾಗಿ, ಪರಿಣಾಮಗಳಿಗೆ ಅವರೇ ಹೊಣೆ ಹೊರತು ರಾಜ್ಯ ಸರ್ಕಾರವಲ್ಲ. ಇದು ಅವರ ತಪ್ಪು, ಅವರು ವಿಷಕಾರಿ ಎಂದು ತಿಳಿದ ನಂತರವೂ ಮದ್ಯವನ್ನು ಸೇವಿಸುತ್ತಾರೆ," ಎಂದರು.
ಬಿಹಾರ ವಿಧಾನಸಭೆ ನಿನ್ನೆ ಪರಿಚಯಿಸಿದ ನಂತರ ಮತ್ತು ರಾಜ್ಯದಲ್ಲಿ ಮೊದಲ ಬಾರಿಗೆ ಅಪರಾಧಿಗಳಿಗೆ ಮದ್ಯ ನಿಷೇಧವನ್ನು ಸಡಿಲಿಕೆ ಮಾಡಲು ಪ್ರಯತ್ನಿಸುವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ನಂತರ ನಿತೀಶ್ ಕುಮಾರ್ ಈ ಟೀಕೆಗಳನ್ನು ಮಾಡಿದರು.
ವಿರೋಧ ಪಕ್ಷಗಳಿಂದ ಬಿಹಾರ ಸಿಎಂ ವಿರುದ್ಧ ವಾಗ್ದಾಳಿ
ರಾಜ್ಯ ಸರ್ಕಾರ ಮದ್ಯ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿರುವ ಕಾರಣ ಬಿಹಾರದಲ್ಲಿ ಈ ಮದ್ಯಪಾನದಿಂದಾಗಿ ಆಗುವ ದುರಂತಗಳು ಮುಂದುವರಿದಿವೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಬಿಹಾರ ಸಿಎಂ ಪ್ರತಿಕ್ರಿಯೆ ನೀಡುತ್ತಾ ಮದ್ಯಪಾನ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ, 2022 ಪ್ರಕಾರ ಮದ್ಯಪಾನ ಮಾಡಿ ಶಿಕ್ಷೆಗೆ ಒಳಗಾಗುವವರು ರಾಜ್ಯಪಾಲರ ಅನುಮೋದನೆಯನ್ನು ಪಡೆದ ನಂತರ, ದಂಡವನ್ನು ಪಾವತಿ ಮಾಡಿ ಡ್ಯೂಟಿ ಮ್ಯಾಜಿಸ್ಟ್ರೇಟ್‌ನಿಂದ ಜಾಮೀನು ಪಡೆಯಬಹುದು. ದಂಡವನ್ನು ಪಾವತಿ ಮಾಡಲು ವಿಫಲವಾದರೆ ಅವನು ಅಥವಾ ಅವಳು ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
2021 ರ ಕೊನೆಯ ಆರು ತಿಂಗಳಲ್ಲಿ 60 ಕ್ಕೂ ಹೆಚ್ಚು ಮಂದಿ ಮದ್ಯ ಸೇವನೆ ಮಾಡಿ ಸಾವನ್ನಪ್ಪಿದ್ದಾರೆ. ಈ ನಂತರ ಮುಖ್ಯಮಂತ್ರಿಯೂ ಮೈತ್ರಿ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಆರ್‌ಜೆಡಿ ಎರಡರಿಂದಲೂ ವಾಗ್ದಾಳಿಯನ್ನು ಎದುರಿಸುತ್ತಿದ್ದಾರೆ. ಮದ್ಯ ನಿಷೇಧ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಮದ್ಯ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿದೆ.












Click it and Unblock the Notifications