ಬಿಹಾರ: ಸಿಎಂ ನಿತೀಶ್ ಕುಮಾರ್ ಗೆ ತೇಜಸ್ವಿ ಯಾದವ್ ಬಹಿರಂಗ ಸವಾಲ್
ಪಾಟ್ನಾ, ಅಕ್ಟೋಬರ್.19: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಗ್ಗೆ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಮ್ ವಿಲಾಸ್ ಪಾಸ್ವಾನ್ ಅವರ ಅಗತ್ಯತೆ ಹೆಚ್ಚಾಗಿತ್ತು. ಇಂಥ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ತಮ್ಮ ತಂದೆಯನ್ನು ಕಳೆದುಕೊಂಡಿರುವುದಕ್ಕೆ ತೇಜಸ್ವಿ ಯಾದವ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಅತ್ಯಾಚಾರಿಗಳ ಪರ ನಿಲ್ಲುವುದು ರಾಜಧರ್ಮವೇ: ಬಿಜೆಪಿಗೆ ಸೋನಿಯಾ ಗಾಂಧಿ ಪ್ರಶ್ನೆ
"ಚಿರಾಗ್ ಪಾಸ್ವಾನ್ ಅವರೊಂದಿಗೆ ಸಿಎಂ ನಿತೀಶ್ ಕುಮಾರ್ ನಡೆದುಕೊಂಡ ಪರಿ ಸರಿಯಾಗಿಲ್ಲ. ಮೊದಲಿಗಿಂತ ಇಂದು ಚಿರಾಗ್ ಪಾಸ್ವಾನ್ ಅವರಿಗೆ ತಂದೆಯ ಸಹಾಯ ಹೆಚ್ಚಾಗಿ ಬೇಕಿತ್ತು. ಆದರೆ ಇಂದು ಅವರು ನಮ್ಮೊಂದಿಗಿಲ್ಲ ಎಂಬುದು ತುಂಬಾ ಬೇಸರದ ಸಂಗತಿಯಾಗಿದೆ. ನಿತೀಶ್ ಕುಮಾರ್ ರಿಂದ ಚಿರಾಗ್ ಪಾಸ್ವಾನ್ ಅವರಿಗೆ ಅನ್ಯಾಯವಾಗಿದೆ. ಅವರ ನಡುವಳಿಕೆ ಕೂಡಾ ಉತ್ತಮವಾಗಿಲ್ಲ" ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ಸಿಎಂ ನಿತೀಶ್ ಗೆ ತೇಜಸ್ವಿ ಯಾದವ್ ಸವಾಲ್:
ಬಿಹಾರದಲ್ಲಿ ಕಳೆದ 15 ವರ್ಷಗಳಲ್ಲಿ ನಡೆಸಿದ ಆಡಳಿತದಲ್ಲಿ ಯಾವುದೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಎಷ್ಟೆಲ್ಲ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರುವಂತೆ ಸಿಎಂ ನಿತೀಶ್ ಕುಮಾರ್ ಅವರಿಗೆ ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ. ಯಾವುದೇ ವಿಷಯ ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ಸಿಎಂ ನಿತೀಶ್ ಕುಮಾರ್ ಮಾತನಾಡಲಿ. ಅವರ ಜೊತೆಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಎಸೆದಿದ್ದಾರೆ.
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.