ಸಿಎಂ ನಿತೀಶ್‌ಗೆ ಸವಾಲು, ಸಿಬಿಐ ತನಿಖೆಗೆ ಸಿದ್ದ ಎಂದ ತೇಜಸ್ವಿ
ಪಾಟ್ನಾ, ಅ. 8: ಬಿಹಾರದ ದಲಿತ ನಾಯಕ ರಾಷ್ಟ್ರೀಯ ಜನತಾ ದಳದ ಮಾಜಿ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅಲ್ಲಗೆಳೆದಿದ್ದಾರೆ. ''ಆರ್‌ಜೆಡಿ ಮಾಜಿ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಿ, ನನ್ನನ್ನು ಬಂಧಿಸಲಿ'' ಎಂದು ಸಿಎಂ ನಿತೀಶ್ ಅವರಿಗೆ ಪತ್ರ ಬರೆದು ಸವಾಲು ಹಾಕಿದ್ದಾರೆ
ದಲಿತ ನಾಯಕ ಶಕ್ತಿ ಮಲಿಕ್ ಅವರ ಹತ್ಯೆ ಪ್ರಕರಣದಲ್ಲಿ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ವಿರುದ್ಧ ಖಜಾಂಚಿ ಹಾಥ್ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಣಿಗಂಜ್(ಮೀಸಲು) ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ಶಕ್ತಿ ಕುಮಾರ್ ಮಲೀಕ್(40) ಸಿದ್ಧತೆ ನಡೆಸಿದ್ದರು. ಆದರೆ, ಅಕ್ಟೋಬರ್ 04ರಂದು ಪೂರ್ನಿಯಾ ಜಿಲ್ಲೆಯ ಅವರ ನಿವಾಸದ ಬಳಿ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ರಾಜಕೀಯ ದ್ವೇಷದಿಂದ ಆಗಿರುವ ಹತ್ಯೆ ಎಂದು ಸಂಚಲನ ಸೃಷ್ಟಿಯಾಗಿದೆ.

ಅರ್ ಜೆ ಡಿಯ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಕ್ತಿ ಕುಮಾರ್ ಅವರನ್ನು ಆರ್ ಜೆಡಿ ಕಡೆಯವರೇ ಹತ್ಯೆ ಮಾಡಿದ್ದಾರೆ ಎಂದು ಶಕ್ತಿ ಅವರ ಪತ್ನಿ ಖುಷ್ಬು ಕುಮಾರಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ 50 ಲಕ್ಷ ರು ಎಂದು ಆರ್ ಜೆಡಿ ಬೇಡಿಕೆ ಇಟ್ಟಿತ್ತು. ಆದರೆ, ಶಕ್ತಿ ಅವರು ಒಪ್ಪದೆ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದರು.
ಪಾರ್ಟಿ ಫಂಡ್ ಕೊಡದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಅನಿಲ್, ತೇಜಸ್ವಿ, ತೇಜ್ ಅವಾಜ್ ಹಾಕುವ ವಿಡಿಯೋವನ್ನು ಶಕ್ತಿ ಅವರ ಕುಟುಂಬದವರು ಪೊಲೀಸರ ಮುಂದಿಟ್ಟಿದ್ದಾರೆ.
"ಇದು ಚುನಾವಣೆ ಸಂದರ್ಭದಲ್ಲಿ ಮಾಡಿರುವ ಸುಳ್ಳು ಆರೋಪ, ಯಾವುದೆ ಆಧಾರಗಳಿಲ್ಲದ ಹೇಳಿಕೆ ಮುಂದಿಟ್ಟುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಆರ್ ಜೆ ಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್, ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್, ಅನಿಲ್ ಕುಮಾರ್ ಸಾಧು(ಎಲ್ ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಅಳಿಯ), ಕಲೋ ಪಾಸ್ವಾನ್, ಸುನೀತಾ ದೇವಿ ಹಾಗೂ ಮನೋಜ್ ಪಾಸ್ವಾನ್ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐ ಆರ್ ಹಾಕಲಾಗಿದೆ ಎಂದು ಠಾಣಾಧಿಕಾರಿ ಸುನಿಲ್ ಕುಮಾರ್ ಹೇಳಿದ್ದಾರೆ.












Click it and Unblock the Notifications