ಮೈತ್ರಿ ಬಿಡಲು ಸಿದ್ಧರಾಗಿದ್ದರೇ ನಿತೀಶ್?: ಲಾಲು ಹೇಳಿದ ಸ್ಫೋಟಕ ಮಾಹಿತಿ
ಪಟ್ನಾ, ಏಪ್ರಿಲ್ 5: ಬಿಹಾರ ವಿಧಾನಸಭೆ ಚುನಾವಣೆಯ ಬಳಿಕ ಮಹಾಮೈತ್ರಿಕುಟಕ್ಕೆ ಕೈಕೊಟ್ಟು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿರುವ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್, ಪುನಃ ತಮ್ಮ ಬಳಿಗೆ ಬರಲು ಮುಂದಾಗಿದ್ದರು. ಆದರೆ, ತಾವೇ ಅವರಿಗೆ ಸಾಧ್ಯವಿಲ್ಲ ಎಂದು ಮರಳಿ ಕಳುಹಿಸಿದ್ದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲಾಲು ಅವರು ಬರೆದಿರುವ ಇನ್ನೂ ಬಿಡುಗಡೆಯಾಗಬೇಕಿರುವ 'ಗೋಪಾಲ್‌ಗಂಜ್ ಟು ರೈಸಿನಾ: ಮೈ ಪೊಲಿಟಿಕಲ್ ಜರ್ನಿ' ಪುಸ್ತಕದಲ್ಲಿ ನಿತೀಶ್ ಕುಮಾರ್ ಮತ್ತು ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್ ಅವರ ಕುರಿತು ಬರೆದಿದ್ದಾರೆ. ಈ ಕೃತಿಗೆ ನಳಿನ್ ವರ್ಮಾ ಸಹ ಲೇಖಕರಾಗಿದ್ದಾರೆ.
ಬಿಜೆಪಿಯೊಂದಿಗೆ ಸೇರಿಕೊಂಡು ಸರ್ಕಾರ ರಚಿಸಿದ ಆರು ತಿಂಗಳ ಒಳಗೇ ಮಹಾಘಟಬಂಧನಕ್ಕೆ ಮರಳಲು ನಿತೀಶ್ ಬಯಸಿದ್ದರು. ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಐದು ವಿಭಿನ್ನ ಸಂದರ್ಭಗಳಲ್ಲಿ ತಮ್ಮ ಬಳಿಗೆ ಕಳುಹಿಸಿದ್ದರು. ವಿವಿಧ ರಾಜಕೀಯ ಪಕ್ಷಗಳು ಸೇರಿಕೊಂಡು ರಚಿಸಿರುವ ಜಾತ್ಯತೀತ ಒಕ್ಕೂಟದೊಳಗೆ ಮತ್ತೆ ಸೇರ್ಪಡೆಗೊಳ್ಳುವ ಸಲುವಾಗಿ ಮನವೊಲಿಸಲು ಕಿಶೋರ್ ಬಂದಿದ್ದರು. ಆದರೆ, ನಿತೀಶ್ ಕುಮಾರ್ ಅವರ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರಿಂದ ಅದಕ್ಕೆ 'ಇಲ್ಲ' ಎಂದಿದ್ದಾಗಿ ಅವರು ಹೇಳಿದ್ದಾರೆ.

'ನನ್ನ ಪಕ್ಷವು ಜೆಡಿಯುಗೆ ಬೆಂಬಲ ನೀಡುವುದಾಗಿ ಬರೆದುಕೊಟ್ಟರೆ ಬಿಜೆಪಿ ಮೈತ್ರಿಯಿಂದ ಹೊರಬಂದು ಮಹಾಘಟಬಂಧನಕ್ಕೆ ಸೇರಿಕೊಳ್ಳುವುದನ್ನು ಹೇಳಲು ಕಿಶೋರ್ ಬಯಸಿದ್ದರು. ನನಗೆ ನಿತೀಶ್ ವಿರುದ್ಧ ಯಾವುದೇ ವೈಮನಸ್ಸು ಇಲ್ಲದಿದ್ದರೂ ಅವರ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ. ಒಂದು ವೇಳೆ ಕಿಶೋರ್ ಅವರ ಆಹ್ವಾನವನ್ನು ಒಪ್ಪಿಕೊಂಡರೆ 2015ರಲ್ಲಿ ಮಹಾಘಟಬಂಧನದ ಪರವಾಗಿ ಮತ ಹಾಕಿದ ಜನರು ಮತ್ತು ದೇಶದ ಇತರೆಡೆ ಬಿಜೆಪಿ ವಿರುದ್ಧ ಒಂದಾಗಿರುವ ಇತರೆ ಪಕ್ಷಗಳು ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಬಗ್ಗೆ ನನಗೆ ಖಚಿತತೆ ಇರಲಿಲ್ಲ' ಎಂದು ಬರೆದಿದ್ದಾರೆ.
ಆದರೆ, ಈ ಹೇಳಿಕೆಯನ್ನು ಜೆಡಿಯು ತಳ್ಳಿಹಾಕಿದೆ. ಲಾಲು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.
2017ರಲ್ಲಿ ಮಹಾಘಟಬಂಧನದಿಂದ ಹೊರ ಬಂದ ಬಳಿಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಬಳಿ ಹೋಗಲು ಎಂದಿಗೂ ಇಚ್ಛಿಸಿರಲಿಲ್ಲ. ಹಾಗೊಮ್ಮೆ ಆಸಕ್ತಿ ತೋರಿದ್ದರೆ ಅದು ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚೆಯಾಗುತ್ತಿತ್ತು. ಆರ್‌ಜೆಡಿಯನ್ನು ಜೆಡಿಯು ಶಾಶ್ವತವಾಗಿ ತಿರಸ್ಕರಿಸಿದೆ. ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದ್ದ ಕೊನೆಯ ವ್ಯಕ್ತಿಯೆಂದರೆ ನಿತೀಶ್ ಕುಮಾರ್ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ ಹೇಳಿದ್ದಾರೆ.












Click it and Unblock the Notifications