ನಿತೀಶ್ ಕುಮಾರ್ ಎನ್‌ಡಿಎ ಸಾರಥಿ: ಅಮಿತ್ ಶಾ ಘೋಷಣೆ
ಪಟ್ನಾ, ಜನವರಿ 17: ಬಿಹಾರದ ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಭದ್ರ ಅಡಿಪಾಯ ಕಾಕಲು ಮುಂದಾಗಿರುವ ಬಿಜೆಪಿ, ಜೆಡಿಯು ನಾಯಕ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ಸಾರಥಿಯಾಗಿರಲಿದ್ದಾರೆ ಎಂದು ಘೋಷಿಸಿದೆ. ಈ ಮೂಲಕ ಬಿಹಾರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಜೆಡಿಯು ಜತೆ ಚುನಾವಣಾ ಪೂರ್ವ ಮೈತ್ರಿಯನ್ನು ಮುಂದುವರಿಸುವ ಸೂಚನೆ ನೀಡಿದೆ.
ಈ ವರ್ಷ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ನೇತೃತ್ವವನ್ನು ನಿತೀಶ್ ಕುಮಾರ್ ಅವರೇ ವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಪಟ್ನಾ ಸಮೀಪದ ವೈಶಾಲಿಯಲ್ಲಿ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ ಪಕ್ಷದಿಂದ ಆಯೋಜಿಸಲಾಗಿದ್ದ ಜನ ಜಾಗರಣ ಅಭಿಯಾನದ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಮಾತನಾಡಿದರು.
ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡುವುದಿಲ್ಲ ಎಂದು ನಿತೀಶ್ ಕುಮಾರ್ ಹೇಳಿಕೆ ನೀಡಿದ್ದರು. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಎನ್‌ಆರ್‌ಸಿ ಮತ್ತು ಸಿಎಎ ಸಂಬಂಧ ನಿತೀಶ್ ಬೆಂಬಲ ಪಡೆಯಲು, ಅವರ ಮನವೊಲಿಸುವ ಸಲುವಾಗಿ ಅಮಿತ್ ಶಾ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ನಿತೀಶ್ ನೇತೃತ್ವದಲ್ಲಿ ಚುನಾವಣೆ
'ಬಿಹಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಲಾಲು ಅವರ ಕನಸು ಈ ಬಾರಿಯೂ ಈಡೇರುವುದಿಲ್ಲ' ಎಂದು ಅಮಿತ್ ಶಾ ಹೇಳಿದರು.

ಜಂಗಲ್‌ರಾಜ್‌ನಿಂದ ಜನತಾ ರಾಜ್
ಬಿಹಾರ ಮತ್ತು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದ ಅವರು, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು. 'ನಾವು ಬಿಹಾರವನ್ನು ಲ್ಯಾಟೀನ್ ಯುಗದಿಂದ ಎಲ್‌ಇಡಿ ಯುಗಕ್ಕೆ ಕರೆದೊಯ್ದಿದ್ದೇವೆ. ಲೂಟಿಯಿಂದ ಕಾನೂನು ಸುವ್ಯವಸ್ಥೆಗೆ, ಮೇವು ಹಗರಣದಿಂದ ಗೋವುಗಳ ರಕ್ಷಣೆಗೆ ಮತ್ತು ಜಂಗಲ್ ರಾಜ್‌ನಿಂದ ಜನತಾ ರಾಜ್‌ಗೆ ಕೊಂಡೊಯ್ದಿದ್ದೇವೆ' ಎಂದರು.

ಇಮ್ರಾನ್ ಖಾನ್ ಭಾಷೆಯಲ್ಲಿ ಮಾತಾಡುತ್ತಿದ್ದಾರೆ
'ಹೊಸ ಪೌರತ್ವ ಕಾಯ್ದೆಯು ಯಾರದೇ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಶೋಷಣೆಗೆ ಒಳಗಾದವರಿಗೆ ಪೌರತ್ವ ನೀಡಲಿದೆ. ನಾವು ಅವರಿಗೆ ಪೌರತ್ವ ನೀಡಬೇಕೇ, ಬೇಡವೇ? ಆದರೆ ವಿರೋಧಪಕ್ಷದಲ್ಲಿರುವ ಕಾಂಗ್ರೆಸ್, ಲಾಲು ಪ್ರಸಾದ್, ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ' ಎಂದು ಹರಿಹಾಯ್ದರು.

ಹಿಂದೂಗಳು ಎಲ್ಲಿ ಹೋದರು?
'ಧರ್ಮದ ಆಧಾರದಲ್ಲಿ ಈ ಹಿಂದೆ ದೇಶವನ್ನು ವಿಭಜನೆ ಮಾಡಿದವರು ಕಾಂಗ್ರೆಸ್ಸಿಗರು. ಪೂರ್ವದಲ್ಲಿ (ಈಗಿನ ಬಾಂಗ್ಲಾದೇಶ) ಮತ್ತು ಪಾಕಿಸ್ತಾನದಲ್ಲಿ ಶೇ 30ರಷ್ಟು ಹಿಂದೂಗಳು ಇದ್ದರು. ಆದರೆ ಇಂದು ಬಾಂಗ್ಲಾದೇಶದಲ್ಲಿ ಕೇವಲ ಶೇ 7 ಮತ್ತು ಪಾಕಿಸ್ತಾನದಲ್ಲಿ ಶೇ 15ರಷ್ಟು ಮಾತ್ರ ಹಿಂದೂಗಳು ಇದ್ದಾರೆ. ಇದಕ್ಕೆ ಯಾರು ಹೊಣೆ? ಅವರೆಲ್ಲರೂ ಎಲ್ಲಿ ಹೋದರು ಎಂದು ಲಾಲು, ರಾಹುಲ್ ಮತ್ತು ಅವರ ಕಂಪೆನಿ ಉತ್ತರ ನೀಡಬೇಕು' ಎಂದು ಕಿಡಿಕಾರಿದರು.











Click it and Unblock the Notifications