Breaking: ಸೋನಾಲಿ ಫೋಗಟ್ ಸಾವು: ಗೋವಾದಲ್ಲಿ ಕೊಲೆ ಪ್ರಕರಣ ದಾಖಲು
ನವದೆಹಲಿ, ಆಗಸ್ಟ್ 25: ಗೋವಾದಲ್ಲಿ ಶವವಾಗಿ ಪತ್ತೆಯಾದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಗೋವಾ ಪೊಲೀಸರು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದಂತೆ ಆಕೆಯ ಕುಟುಂಬದವರು ನೀಡಿದ ದೂರಿನ ನಂತರ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಫೋಗಟ್ ಅವರ ಸಹೋದರ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದು, ಆಕೆಯ ಇಬ್ಬರು ಸಹಚರರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇಬ್ಬರು ವ್ಯಕ್ತಿಗಳ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರವೇ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡುತ್ತಾರೆ ಎಂದು ಸಹೋದರ ಹೇಳಿದರು.
ನಟಿಯ ಸಹೋದರ ರಿಂಕು ಢಾಕಾ ನೀಡಿರುವ ದೂರಿನಲ್ಲಿ, ಆಗಸ್ಟ್ 23 ರಂದು ಸಾಯುವ ಕೆಲವು ಗಂಟೆಗಳ ಮೊದಲು ಫೋಗಟ್ ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದರು ಎಂದು ಹೇಳಿದ್ದಾರೆ. ಸಂಭಾಷಣೆಯ ಸಮಯದಲ್ಲಿ ಸೋನಾಲಿ ತನ್ನ ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು ಎಂದು ಅವರು ಹೇಳಿದ್ದಾರೆ.
"ಸಾಂಗ್ವಾನ್ ತನಗೆ ಕೆಲವು ಅಮಲು ಪದಾರ್ಥಗಳನ್ನು ಬೆರೆಸಿದ ಆಹಾರವನ್ನು ನೀಡಿದ್ದಾನೆ, ತನ್ನ ಮೇಲೆ ಅತ್ಯಾಚಾರ ಮತ್ತು ವಿಡಿಯೋವನ್ನು ಮಾಡಿದ್ದಾನೆ. ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಅವಳು (ಸೋನಾಲಿ) ಹೇಳಿದ್ದಾಳೆ" ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.
ಸೋನಾಲಿ ಅವರ ರಾಜಕೀಯ ಮತ್ತು ನಟನಾ ವೃತ್ತಿಯನ್ನು ನಾಶಪಡಿಸುವುದಾಗಿ ಸಾಂಗ್ವಾನ್ ಬೆದರಿಕೆ ಹಾಕಿದ್ದಾರೆ. ಆಕೆಯ ಫೋನ್‌ಗಳು, ಆಸ್ತಿ ದಾಖಲೆಗಳು, ಎಟಿಎಂ ಕಾರ್ಡ್‌ಗಳು ಮತ್ತು ಮನೆಯ ಕೀಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
ಹರಿಯಾಣ ಬಿಜೆಪಿ ನಾಯಕಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಿದ್ದ ನಟಿ ಸೋನಾಲಿ ಫೋಗಟ್ ಅವರನ್ನು ಸೋಮವಾರ ತಡರಾತ್ರಿ ಗೋವಾದ ಆಸ್ಪತ್ರೆಗೆ ಕರೆದೊಯ್ದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಪ್ರಾಥಮಿಕ ವರದಿಗಳು ಸೋನಾಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದೆ.
ಆದರೆ, ಅವರ ಕುಟುಂಬ ಸದಸ್ಯರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದರು. 'ನನ್ನ ತಾಯಿಗೆ ನ್ಯಾಯ ಸಿಗಬೇಕು' ಎಂದ ಸೋನಾಲಿ ಫೋಗಟ್ ಅವರ 15 ವರ್ಷದ ಮಗಳು ಕೂಡ ಆಗ್ರಹಿಸಿದ್ದರು.
ಸೋನಾಲಿ ಕಳೆದ 15 ವರ್ಷಗಳಿಂದ ಬಿಜೆಪಿ ನಾಯಕಿಯಾಗಿದ್ದರು. ಆಕೆಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವಂತೆ ನಾವು ಪ್ರಧಾನಿಯವರಲ್ಲಿ ಮನವಿ ಮಾಡುತ್ತೇವೆ ಎಂದು ಆಕೆಯ ಸಹೋದರ ಹೇಳಿದರು.
ಸೋನಾಲಿ ಫೋಗಟ್ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಹರಿಯಾಣ , ದೆಹಲಿ, ಚಂಡೀಗಢದ ನಿಗದಿತ ಪ್ರವಾಸ ವಿಭಾಗದ ಜವಾಬ್ದಾರಿಯನ್ನು ಸಹ ನೀಡಲಾಯಿತು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು. ಮಧ್ಯಪ್ರದೇಶ, ಜಾರ್ಖಂಡ್ ನಲ್ಲಿ ಆದಿವಾಸಿಗಳ ಪರ ಕೆಲಸ ಮಾಡಿದ್ದರು.
2019ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಕಾಂಗ್ರೆಸ್‌ನ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಜಯ ಸಾಧಿಸಲಿಲ್ಲ. ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಬಿಜೆಪಿಗೆ ಸೇರ್ಪಡೆಗೊಂಡು, ಕಳೆದ ತಿಂಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಆದಂಪುರದಿಂದ ಸೋನಾಲಿ ಫೋಗಟ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳಿದ್ದವು. ಇದರ ನಡುವೆ ಬಿಷ್ಣೋಯ್ ಕಳೆದ ವಾರ ಸೋನಾಲಿ ಫೋಗಟ್ ಅವರನ್ನು ಭೇಟಿ ಮಾಡಿದ್ದರು.












Click it and Unblock the Notifications