ಗೋವಾ ಚುನಾವಣೆ; ಮೈತ್ರಿ ಸುಳಿವು ಕೊಟ್ಟ ಶರದ್ ಪವಾರ್

ಪಣಜಿ, ಜನವರಿ 12; ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಲು ಚಿಂತನೆ ನಡೆಸಿವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ.

ಸೋಮವಾರ ಕಾಂಗ್ರೆಸ್ ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಮಂಗಳವಾರ ಶರದ್ ಪವಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

"ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಮತ್ತು ಕಾಂಗ್ರೆಸ್ ಗೋವಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸಲು ಚರ್ಚೆಗಳು ನಡೆಯುತ್ತಿವೆ. ನಾವು ಅವರಿಗೆ ನಮ್ಮ ಸ್ಥಾನಗಳ ಆಯ್ಕೆಯನ್ನು ನೀಡಿದ್ದೇವೆ. ಶೀಘ್ರವೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಶರದ್ ಪವಾರ್ ಹೇಳಿದರು.

NCP TMC And Congress May Fight Goa Elections Together

"ಒಟ್ಟಾಗಿ ಚುನಾವಣೆ ಎದುರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇನ್ನೂ ಈ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಗೋವಾ ರಾಜ್ಯಕ್ಕೆ ಬದಲಾವಣೆ ಅಗತ್ಯವಿದೆ. ಗೋವಾದ ಬಿಜೆಪಿ ಸರ್ಕಾರ ಬದಲಾವಣೆ ಮಾಡಬೇಕಿದೆ" ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್, ಟಿಎಂಸಿ ಮೈತ್ರಿ; ಕಾಂಗ್ರೆಸ್ ಮತ್ತು ಟಿಎಂಸಿ ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿ ಸೋಮವಾರ ಹಬ್ಬಿತ್ತು. ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಎಐಸಿಸಿ ಗೋವಾ ಚುನಾವಣೆ ಉಸ್ತುವಾರಿ ದಿನೇಶ್ ಗುಂಡೂರಾವ್ ಟಿಎಂಸಿ ಜೊತೆ ಕಾಂಗ್ರೆಸ್ ಮೈತ್ರಿ ಇಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದರು.

ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮೊದಲ ಬಾರಿಗೆ ಗೋವಾ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದೆ. ಗೋವಾ ಕಾಂಗ್ರೆಸ್‌ನ ಹಲವು ನಾಯಕರು ಟಿಎಂಸಿ ಸೇರಿದ್ದಾರೆ.

ಆದರೆ ರಾಜ್ಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದು ಬಿಟ್ಟು ಟಿಎಂಸಿ ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಆದ್ದರಿಂದ ಟಿಎಂಸಿ ಜೊತೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ರಾಜಕೀಯ ಚಟುವಟಿಕೆ ಬಿರುಸು; ಶನಿವಾರ ಗೋವಾ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ರಾಜಕೀಯ ಚಟುವಿಟಿಕೆ ಬಿರುಸುಗೊಂಡಿದೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಸಚಿವರಾಗಿದ್ದ ಮೈಕಲ್ ಲೋಬೋ ಹಾಗೂ ಪ್ರವೀಣ್ ಜಾಂತ್ಯೆ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ ಮತ್ತು ಬಿಜೆಪಿ ತೊರೆದಿದ್ದಾರೆ. ಈ ಮೂಲಕ ಬಿಜೆಪಿಯ ನಾಲ್ವರು ಶಾಸಕರು ಇದುವರೆಗೂ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ 23ಕ್ಕೆ ಕುಸಿತವಾಗಿದೆ.

ಪಕ್ಷೇತರ ಶಾಸಕರಾಗಿದ್ದ ಗೋವಿಂದ ಗಾವಡೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಸಂಸ್ಕೃತಿ ಸಚಿವರಾಗಿದ್ದರು. ಮಂಗಳವಾರ ಶಾಸಕ ಸ್ಥಾನಕ್ಕೆ ಗೋವಿಂದ ಗಾವಡೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 40 ಸದಸ್ಯ ಬಲದ ವಿಧಾನಸಭೆಯಲ್ಲಿ 36 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 17ರಲ್ಲಿ ಜಯಗಳಿಸಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. 13 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿತ್ತು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತು ಎಎಪಿ ಗೋವಾದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಗೋವಾದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಎಎಪಿ ಪ್ರತಿಪಕ್ಷ ಸ್ಥಾನವನ್ನು ಅಲಂಕರಿಸಲಿದೆ ಎಂದು ಅಂದಾಜಿಸಿವೆ.

ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು ಎಂದು ಪ್ರಯತ್ನ ನಡೆಸುತ್ತಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+