ಗೋವಾ ಉಪ ಚುನಾವಣೆಗೆ ಮನೋಹರ್ ಪುತ್ರನಿಗೆ ಟಿಕೆಟ್?
ಪಣಜಿ, ಏಪ್ರಿಲ್ 25: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕರ್ ಅವರ ಹಿರಿಯ ಮಗ ಉತ್ಪಲ್ ಪರಿಕರ್ ಅವರನ್ನು ಸಕ್ರಿಯ ರಾಜಕೀಯಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಮುಂಬರುವ ಪಣಜಿ ವಿಧಾನಸಭಾ ಸ್ಥಾನಕ್ಕಾಗಿ ನಡೆಯಲಿರುವ ಉಪ ಚುನಾವಣೆಯಲ್ಲಿ ಉತ್ಪಲ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ.
ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಅವರು ಪಣಜಿ ಘಟಕದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಸಂಭಾವ್ಯಪಟ್ಟಿಯಲ್ಲಿ ಉತ್ಪಲ್ ಹೆಸರು ಸೇರಿಸಲಾಗಿದೆ. ಉತ್ಪಲ್ ಅವರ ಹೆಸರಲ್ಲದೆ, ಸಿದ್ಧಾಥ್ ಕುಂಕೊಲಿಂಕರ್ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಇಬ್ಬರ ಹೆಸರನ್ನು ಪಕ್ಷದ ಸಂಸದೀಯ ಸಮಿತಿಗೆ ಕಳಿಸಲಾಗಿದ್ದು, ಅಂತಿಮ ಪಟ್ಟಿಯನ್ನು ನಂತರ ಹೆಸರಿಸಲಾಗುವುದು. ಪಣಜಿ ವಿಧಾನಸಭಾ ಉಪ ಚುನಾವಣೆ ಮೇ 19ಕ್ಕೆ ನಿಗದಿಯಾಗಿದೆ. ಮುಖ್ಯಮಂತ್ರಿಯಾಗಿದ್ದ, ಈ ಕ್ಷೇತ್ರದ ಶಾಸಕ ಮನೋಹರ್ ಪರಿಕರ್ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಅವರ ಪುತ್ರನಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

38 ವರ್ಷ ವಯಸ್ಸಿನ ಉತ್ಪಲ್ ಅವರು ಯುಎಸ್ ನಿಂದ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದು, ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. 2015ರಲ್ಲಿ ಪಣಜಿ ಕ್ಷೇತ್ರದಲ್ಲಿ ಸಿದ್ಧಾರ್ಥ್ ಕುಂಕೊಲಿಂಕರ್ ಅವರು ಮೊದಲಿಗೆ ಜಯ ದಾಖಲಿಸಿದರು. ನಂತರ ತಮ್ಮ ಸ್ಥಾನವನ್ನು ಮನೋಹರ್ ಪರಿಕರ್ ಅವರಿಗೆ ಬಿಟ್ಟುಕೊಟ್ಟಿದ್ದರು. ಕಾಂಗ್ರೆಸ್ ಪಕ್ಷ ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ್ದು, ಮಾಜಿ ಸಚಿವ ಅಟಾನಾಸಿಯೋ ಮೊನ್ಸೆರಟೆ ಅವರು ಕಣಕ್ಕಿಳಿದಿದ್ದಾರೆ. 22 ಸಾವಿರ ಮತದಾರರನ್ನು ಈ ಕ್ಷೇತ್ರದಲ್ಲಿದ್ದಾರೀ(ಪಿಟಿಐ)












Click it and Unblock the Notifications