ಗೋವಾ ಚುನಾವಣೆ; ಫೆ. 2ಕ್ಕೆ ರಾಹುಲ್ ಗಾಂಧಿಯಿಂದ ಪ್ರಣಾಳಿಕೆ ಬಿಡುಗಡೆ
ಪಣಜಿ, ಜನವರಿ 30; ಗೋವಾ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ವಿವಿಧ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿವೆ.
ಕಾಂಗ್ರೆಸ್ ನಾಯಕ ರಾಹುಲ್ಫೆಬ್ರವರಿ 2ರಂದು ಗೋವಾದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಂಕೆಲ್ವಿಮ್‌ನಲ್ಲಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಗೋವಾ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗಿರೀಶ್ ಚೋಡಂಕರ್ ಹೇಳಿದ್ದಾರೆ.
ಸಂಕೆಲ್ವಿಮ್ ಕ್ಷೇತ್ರ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತವರು ಕ್ಷೇತ್ರ. ಇಲ್ಲಿ ರಾಹುಲ್ ಗಾಂಧಿ ಮಾಡುವ ಭಾಷಣ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನೇರ ಪ್ರಸಾರ ಮಾಡಲು 40 ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

ಈ ಸ್ಕ್ರೀನ್ ವ್ಯವಸ್ಥೆ ಮೂಲಕ 20 ಸಾವಿರ ಜನರು ರಾಹುಲ್ ಗಾಂಧಿ ಭಾಷಣ ಆಲಿಸಲಿದ್ದಾರೆ. ಇನ್ನೂ ಸಾವಿರಾರು ಜನರು ವಿವಿಧ ಆನ್‌ಲೈನ್ ಪ್ಲಾಟ್ ಫಾರಂ ಮೂಲಕ ಸಮಾವೇಶದ ಭಾಗವಾಗಲಿದ್ದಾರೆ.
ಪ್ರಣಾಳಿಕೆ ಬಿಡುಗಡೆ; ಸ್ಕ್ರೀನ್ ವ್ಯವಸ್ಥೆ ಮಾಡಲಾದ 40 ಕೇಂದ್ರಗಳ ಪೈಕಿ 15 ಕೇಂದ್ರಗಳಿಂದ ಜನರು ರಾಹುಲ್ ಗಾಂಧಿ ಜೊತೆ ಸಂವಾದ ನಡೆಸಲಿದ್ದಾರೆ. ರಾಹುಲ್ ಗಾಂಧಿ ಫೆಬ್ರವರಿ 2ರಂದು ಗೋವಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಹ ಬಿಡುಗಡೆ ಮಾಡಲಿದ್ದಾರೆ.
ಗೋವಾದ 40 ಸ್ಥಾನಗಳ ಪೈಕಿ 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗೋವಾ ಫಾರ್ವರ್ಡ್ ಪಕ್ಷದ ಜೊತೆ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, 3 ಸ್ಥಾನಗಳನ್ನು ಪಕ್ಷಕ್ಕೆ ಬಿಟ್ಟುಕೊಟ್ಟಿದೆ.
ರಾಹುಲ್ ಗಾಂಧಿ ಒಂದು ದಿನದ ಗೋವಾ ಪ್ರವಾಸದ ವೇಳೆ ಕಾಂಗ್ರೆಸ್ ಮತ್ತು ಗೋವಾ ಫಾರ್ವರ್ಡ್ ಪಕ್ಷದ ಎಲ್ಲಾ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಸಿಎಂ ಅಭ್ಯರ್ಥಿ ಘೋಷಣೆ; ಗೋವಾ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಕೆಲವು ದಿನಗಳ ಹಿಂದ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಜ್ಯದ ಚುನಾವಣಾ ವೀಕ್ಷಕ, ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ, "ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳ ಸಭೆ ನಡೆಸಲಾಗುತ್ತದೆ" ಎಂದು ಹೇಳಿದ್ದರು.
"ಅಭ್ಯರ್ಥಿಗಳ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕೆ?, ಬೇಡವೇ? ಎಂದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಇದನ್ನು ಬಳಿಕ ಎಐಸಿಸಿಗೆ ಕಳುಹಿಸಿಕೊಡಲಾಗುತ್ತದೆ. ಎಐಸಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ" ಎಂದು ಹೇಳಿದ್ದರು.
ಫೆಬ್ರವರಿ 14ಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜನವರಿ 28 ಕೊನೆಯ ದಿನವಾಗಿತ್ತು. ಜನವರಿ 31 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಗೋವಾದ ಚುನಾವಣೆ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.
ಅಮಿತ್ ಶಾ ಭೇಟಿ; ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಗೋವಾಕ್ಕೆ ಭೇಟಿ ನೀಡಿದ್ದು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಗೋವಾದಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗಾಂಧಿ ಕುಟುಂಬಕ್ಕೆ ಗೋವಾ ರಜೆಯ ಪ್ರವಾಸ ಕಳೆಯುವ ಸ್ಥಳವಾಗಿದೆ" ಎಂದು ಟೀಕಿಸಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ಬಗ್ಗೆ ಇದುವರೆಗೂ ನಡೆದ ಸಮೀಕ್ಷೆಗಳು ಕಾಂಗ್ರೆಸ್ 2ನೇ ಸ್ಥಾನ ಪಡೆಯಲಿವೆ ಎಂದು ಹೇಳಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. ಈ ಬಾರಿ ಶಿವಸೇನೆ, ಎನ್‌ಸಿಪಿ, ಟಿಎಂಸಿ ನೀಡಿದ್ದ ಮೈತ್ರಿಕೂಟ ರಚನೆ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕಾರ ಮಾಡಿತ್ತು.












Click it and Unblock the Notifications