ರಾಹುಲ್ ಮೋದಿ ಪೋಬಿಯಾದಿಂದ ಬಳಲುತ್ತಿದ್ದಾರೆ; ಅಮಿತ್ ಶಾ
ಪಣಜಿ, ಜನವರಿ 30; ಗೋವಾ ವಿಧಾನಸಭೆ ಚುನಾವಣೆ ಪ್ರಚಾರ ಕಣ ರಂಗೇರುತ್ತಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋವಾ ಪ್ರವಾಸದಲ್ಲಿದ್ದಾರೆ. ಪೊಂಡಾದಲ್ಲಿ ಅವರು ಮನೆ-ಮನೆ ಪ್ರಚಾರ ನಡೆಸಿದರು. ಬಿಜೆಪಿ ನಾಯಕರ ಜೊತೆ ಸಭೆ ನಡೆಸಿದರು, ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದರು.
ಪೊಂಡಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, "ಗೋವಾದ ಜನರ ಮುಂದೆ ಎರಡು ಆಯ್ಕೆಗಳಿವೆ. ಭಾರತೀಯ ಜನತಾ ಪಕ್ಷದ ಗೋಲ್ಡನ್ ಗೋವಾ ಮತ್ತು ಕಾಂಗ್ರೆಸ್‌ನ ಗಾಂಧಿ ಪರಿವಾರದ ಗೋವಾ" ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, "ರಾಹುಲ್ ಗಾಂಧಿ ಮೋದಿ ಪೋಬಿಯಾದಿಂದ ಬಳಲುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದ ದಿಗಂಬರ್ ಕಾಮತ್ ರಾಜ್ಯದಲ್ಲಿ ಯಾವುದೇ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಿಲ್ಲ" ಎಂದು ಆರೋಪಿಸಿದರು.
"ಬಿಜೆಪಿ ಗೋವಾ ರಾಜ್ಯದಲ್ಲಿ ಅಭಿವೃದ್ಧಿಯನ್ನು ಮಾಡಿದೆ. 2013-14ರಲ್ಲಿ ರಾಜ್ಯದ ಬಜೆಟ್ ಗಾತ್ರ 432 ಕೋಟಿ ಇತ್ತು. 2021ರಲ್ಲಿ ಅದನ್ನು 2,567 ಕೋಟಿಗೆ ಏರಿಕೆ ಮಾಡಲಾಗಿದೆ" ಎಂದು ಅಮಿತ್ ಶಾ ಹೇಳಿದರು.
"ಗೋವಾದಲ್ಲಿ ಬಿಜೆಪಿ ಮಾತ್ರ ಸರ್ಕಾರ ರಚನೆ ಮಾಡಲಿದೆ. ಬೇರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಗೋವಾದಲ್ಲಿ ಸರ್ಕಾರ ರಚನೆ ಮಾಡುವುದಿಲ್ಲ" ಎಂದು ಅಮಿತ್ ಶಾ ಟಿಎಂಸಿ ಮತ್ತು ಆಮ್ ಅದ್ಮಿ ಪಕ್ಷಕ್ಕೆ ತಿರುಗೇಟು ನೀಡಿದರು.
ಅಮಿತ್ ಶಾ ಒಂದು ದಿನದ ಪ್ರವಾಸಕ್ಕಾಗಿ ಭಾನುವಾರ ಗೋವಾಕ್ಕೆ ಭೇಟಿ ನೀಡಿದ್ದಾರೆ. ಮನೆ ಮನೆ ಪ್ರಚಾರ ಆರಂಭಿಸುವ ಮೊದಲು ಅವರು ಬೋರಿಮ್ ಟೌನ್‌ನಲ್ಲಿನ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.
ಪೊಂಡಾ ಮತ್ತು ಸ್ಯಾನ್ವೋರ್ಡೆಮ್‌ಗಳಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಳಿಕ ಅಮಿತ್ ಶಾ ವಾಸ್ಕೋಗೆ ತೆರಳಿದರು. ಅಲ್ಲಿ ಸಂಜೆ 7.30ಕ್ಕೆ ಚುನಾವಣಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದು, ಬಳಿಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದೇ ಮೊದಲ ಬಾರಿಗೆ ಗೋವಾದ 40 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಬಿಜೆಪಿ 17 ಶಾಸಕರ ಬಲ ಹೊಂದಿದೆ. ಎಂಜಿಪಿ ಮತ್ತು ಜಿಎಫ್‌ಪಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಮೂವರು ಪಕ್ಷೇತರರು ಬಿಜೆಪಿ ಜೊತೆಗಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಗೋವಾದ ಪ್ರಾದೇಶಿಕ ಪಕ್ಷಗಳು, ಎನ್‌ಸಿಪಿ, ಶಿವಸೇನೆ ಜೊತೆಗೆ ಈ ಬಾರಿಯ ಚುನಾವಣೆಗೆ ಎಎಪಿ ಮತ್ತು ಟಿಎಂಸಿ ಪಕ್ಷಗಳು ಗೋವಾದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎಎಪಿ ಪಕ್ಷ ವಕೀಲರಾಗಿರುವ ಅಮಿತ್ ಪಾಲೇಕರ್ ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ರಾಹುಲ್ ಗಾಂಧಿ ಭೇಟಿ; ವಿಧಾನಸಭೆ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೆಬ್ರವರಿ 2ರಂದು ಗೋವಾಕ್ಕೆ ಆಗಮಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತವರು ಕ್ಷೇತ್ರವಾದ ಸಂಕೆಲ್ವಿಮ್‌ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿ ಮಾಡುವ ಭಾಷಣ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನೇರ ಪ್ರಸಾರ ಮಾಡಲು 40 ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿ ಚುನಾವಣೆಗಾಗಿ ಅಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಹ ಬಿಡುಗಡೆ ಮಾಡಲಿದ್ದಾರೆ.
40 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಮೂರು ಸ್ಥಾನಗಳನ್ನು ಗೋವಾ ಫಾರ್ವರ್ಡ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಎಲ್ಲಾ ಅಭ್ಯರ್ಥಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.












Click it and Unblock the Notifications