ಗೋವಾ; ಅತಂತ್ರ ಫಲಿತಾಂಶ ಸಾಧ್ಯತೆ; ರೆಸಾರ್ಟ್‌ಗೆ ಕಾಂಗ್ರೆಸ್!
ಪಣಜಿ, ಮಾರ್ಚ್ 08; ಗೋವಾದ 40 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ಫೆಬ್ರವರಿ 14ರಂದು ನಡೆದಿತ್ತು. ಸೋಮವಾರ ಎಲ್ಲಾ ರಾಜ್ಯಗಳ ಚುನಾವಣೆ ಪೂರ್ಣಗೊಂಡಿದ್ದು, ಚುನಾವಣೋತ್ತರ ಫಲಿತಾಂಶ ಪ್ರಕಟಗೊಂಡಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ಗೋವಾದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21. ಆದರೆ ಚುನಾವಣೋತ್ತರ ಫಲಿತಾಂಶಗಳು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಿವೆ. ಚುನಾವಣೆಯಲ್ಲಿ ಕಾಂಗ್ರೆಸ್ 14 ರಿಂದ 17, ಬಿಜೆಪಿ 14 ರಿಂದ 17 ಮತ್ತು ಎಎಪಿ 2 ರಿಂದ 4, ಇತರರು 3 ರಿಂದ 6 ಮತ್ತು ಟಿಎಂಸಿ 2-4 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಚುನಾವಣೋತ್ತರ ಫಲಿತಾಂಶ ಪ್ರಕಟವಾದ ಬಳಿಕ ರಾಜಕೀಯ ಪಕ್ಷಗಳ ಲೆಕ್ಕಾಚಾರ ಬದಲಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷ 2017ರ ತಪ್ಪು ಮರುಕಳಿಸಬಾರದು ಎಂದು ಈಗಾಗಲೇ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಬೇರೆ ಪಕ್ಷಗಳು ಶಾಸಕರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಉತ್ತರ ಗೋವಾದಲ್ಲಿರುವ ರೆಸಾರ್ಟ್‌ವೊಂದಕ್ಕೆ ಕರೆದುಕೊಂಡು ಹೋಗಿದೆ.

ಗುರುವಾರ ಮತ ಎಣಿಕೆ ಪೂರ್ಣಗೊಳ್ಳುವ ತನಕ ಕಾಂಗ್ರೆಸ್ ಅಭ್ಯರ್ಥಿಗಳು ರೆಸಾರ್ಟ್‌ನಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಚುನಾವಣಾ ಫಲಿತಾಂಶ ಏನು ಬರಲಿದೆ? ಎಂಬುವುದರ ಮೇಲೆ ಪಕ್ಷದ ನಾಯಕರು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.
ಎಐಸಿಸಿ ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಈ ಕುರಿತು ಮಾತನಾಡಿದ್ದು, "ನಾವು ಎಲ್ಲಾ ಅಭ್ಯರ್ಥಿಗಳು ಒಟ್ಟಿಗೆ ಹೋಗಲು ತೀರ್ಮಾನಿಸಿದ್ದೇವೆ" ಎಂದು ಹೇಳಿದರು.
ಡಿಕೆಶಿಗೆ ಟಾಸ್ಕ್; ಗೋವಾ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ಚಿಕ್ಕಪುಟ್ಟ ಪಕ್ಷಗಳ ಜೊತೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ಹಿರಿಯ ನಾಯಕ ಪಿ. ಚಿದಂಬರಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ವಹಿಸಲಾಗಿದೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಟಿಎಂಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ಟಿಎಂಸಿ ಜೊತೆಗೂ ಕಾಂಗ್ರೆಸ್ ಮಾತುಕತೆ ನಡೆಸುವ ನಿರೀಕ್ಷೆ ಇದೆ.
"ನಾವು ಬಿಜೆಪಿ ವಿರುದ್ಧ ಹೋರಾಟ ಮಾಡಲು ಎಲ್ಲಾ ಪಕ್ಷಗಳ ಜೊತೆ ಮಾತುಕತೆಗೆ ಸಿದ್ಧವಾಗಿದ್ದೇವೆ. ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷದ ಜೊತೆ ಸಹ ನಾವು ಮಾತುಕತೆ ನಡೆಸುತ್ತೇವೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಕಾಂಗ್ರೆಸ್ ಜೊತೆ ಸಹ ಮಾತುಕತೆ ನಡೆಸಲು ಎಎಪಿ ಸಹ ಆಸಕ್ತಿ ತೋರಿದೆ. ಹಲವು ರಾಷ್ಟ್ರೀಯ ವಾಹಿನಿಗಳ ಸಮೀಕ್ಷೆ ಗೋವಾದಲ್ಲಿ ಅತಂತ್ರ ಫಲಿತಾಂಶ ಬರದಲಿದೆ ಎಂದು ಅಂದಾಜಿಸಿದ್ದು, ಗೋವಾದ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.
ಗೋವಾದ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ ಮಾತನಾಡಿದ್ದು, "ಕಾಂಗ್ರೆಸ್‌ನ ಕೆಲವು ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಬಿಜೆಪಿಯೇತರ ಪಕ್ಷಗಳ ಜೊತೆ ಮೈತ್ರಿಗೆ ನಾವು ಸಿದ್ಧರಿದ್ದೇವೆ. ಯಾವುದೇ ಸಂದರ್ಭದಲ್ಲೂ ನಾವು ಬಿಜೆಪಿ ಬೆಂಬಲಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ಗೋವಾದಲ್ಲಿ ಎಂಜಿಪಿ, ಎಎಪಿ, ಟಿಎಂಸಿ ಸೇರಿದಂತೆ ವಿವಿಧ ಪಕ್ಷಗಳು ಇವೆ. ನಮಗೆ ಎಷ್ಟು ಸ್ಥಾನಗಳು ಸಿಗಲಿವೆ ಎಂದು ನಮಗೆ ಖಚಿತತೆ ಇದೆ. ನಾವು ಸರ್ಕಾರ ರಚನೆ ಮಾಡುತ್ತೇವೆ ಎಂಬ ನಂಬಿಕೆ ಇದೆ. ಮಾರ್ಚ್ 10ರ ತನಕ ಕಾಯೋಣ" ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗೋವಾ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಟಿಎಂಸಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿತ್ತು. ಆದರೆ ಗೋವಾ ಫಾರ್ವರ್ಡ್ ಪಾರ್ಟಿ ಹೊರತುಪಡಿಸಿ ಯಾವುದೇ ಪಕ್ಷದ ಜೊತೆಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿಲ್ಲ.












Click it and Unblock the Notifications