ಗೋವಾ ಚುನಾವಣೆ; ಟಿಎಂಸಿ ಜೊತೆ ಮೈತ್ರಿ ಇಲ್ಲ ಎಂದ ಕಾಂಗ್ರೆಸ್!
ಪಣಜಿ, ಜನವರಿ 11; ಗೋವಾ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿದರು. ಗೋವಾದಲ್ಲಿ ಟಿಎಂಸಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸುದ್ದಿಗಳನ್ನು ಕಾಂಗ್ರೆಸ್ ನಾಯಕರು ತಳ್ಳಿ ಹಾಕಿದ್ದಾರೆ.
ಗೋವಾದ ಕಾಂಗ್ರೆಸ್ ನಾಯಕರ ಸಭೆಯನ್ನು ನವದೆಹಲಿಯಲ್ಲಿ ಮಂಗಳವಾರ ರಾಹುಲ್ ಗಾಂಧಿ ನಡೆಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೋವಾ ವಿಧಾನಸಭೆ ಚುನಾವಣೆಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಕಾಂಗ್ರೆಸ್ ಮತ್ತು ಟಿಎಂಸಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಗೋವಾ ಚುನಾವಣೆ ಉಸ್ತುವಾರಿ ದಿನೇಶ್ ಗುಂಡೂರಾವ್ ಈ ವರದಿಯನ್ನು ವರದಿಯನ್ನು ತಳ್ಳಿ ಹಾಕಿದ್ದಾರೆ.

ಸೋಮವಾರ ರಾತ್ರಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, "ಸಂಪೂರ್ಣ ನಿರಾಧಾರ ವರದಿ. ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ದೆಹಲಿಗೆ ಸಹ ಟಿಎಂಸಿಯ ಯಾವುದೇ ನಾಯಕರನ್ನು ಆಹ್ವಾನಿಸಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ಟಿಎಂಸಿ ಮೊದಲ ದಿನದಿಂದಲೂ ಮೈತ್ರಿಗಾಗಿ ಪ್ರಯತ್ನ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಟಿಎಂಸಿಯನ್ನು ಮಾತುಕತೆಗೆ ಆಹ್ವಾನಿಸಿಲ್ಲ. ಟಿಎಂಸಿ ಗೋವಾದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಬದಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಗೋವಾದಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ ಜೊತೆಗೂ ಸಹ ಕಾಂಗ್ರಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿನ ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ಶಿವಸೇನೆ ಜೊತೆಯಾಗಿ ಚುನಾವಣೆ ಎದುರಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಈ ಬಾರಿ ಚುನಾವಣೆಗೆ ಸ್ಪರ್ಧೆ; ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಜೊತೆಗೆ ಈ ಬಾರಿಯ ಗೋವಾ ವಿಧಾನಸಭೆ ಚುನಾವಣೆಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.
The rumour in circulation that a possible alliance with TMC was discussed by Shri @RahulGandhi in today's meeting is completely baseless & untrue.
— K C Venugopal (@kcvenugopalmp) January 10, 2022
Let me assure that the Congress party is confident- we will put Goa back on the path to progress soon.
ತೃಣಮೂಲ ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯದಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಜೊತೆ ಟಿಎಂಸಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿದ್ದವು. ಆದರೆ ಕಾಂಗ್ರೆಸ್ ನಾಯಕರು ಇದನ್ನು ತಳ್ಳಿ ಹಾಕಿದ್ದಾರೆ.
"ಯುಪಿಎ ಎಂದರೇನು?, ಈಗ ಯಾವುದೇ ಯುಪಿಎ ಇಲ್ಲ, ಎಲ್ಲಾ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ" ಎಂದು ಕಳೆದ ತಿಂಗಳು ಎನ್‌ಸಿಪಿ ನಾಯಕ ಶರದ್ ಪವಾರ್ ಭೇಟಿಯಾದಾಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಕಳೆದ ಕೆಲವು ದಿನಗಳ ಹಿಂದೆ ಟಿಎಂಸಿ ಮತ್ತು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಕೇವಲ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಲ್ಲದು. ಟಿಎಂಸಿ, ಎಎಪಿ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗಲಿದೆ" ಎಂದು ಟೀಕಿಸಿದ್ದರು.
ಗೋವಾ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಹಲವಾರು ನಾಯಕರು ಪಕ್ಷವನ್ನು ತೊರೆದಿದ್ದಾರೆ. ರಾಜ್ಯದ ಮಾಜಿ ಮುಖ್ಯಂತ್ರಿ ಲುಯಿಜಿನೊ ಫೆಲೆರೂ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು.
ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್; 2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೋವಾದಲ್ಲಿ ಮುಖಭಂಗ ಅನುಭವಿಸಿತ್ತು. 40 ಸದಸ್ಯ ಬಲದ ವಿಧಾನಸಭೆಯಲ್ಲಿ 17 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹ ಅಧಿಕಾರ ಹಿಡಿಯಲು ವಿಫಲವಾಗಿತ್ತು.
13 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಮೊದಲು ಮನೋಹರ್ ಪರಿಕ್ಕರ್ ಮುಖ್ಯಂಮಂತ್ರಿಯಾಗಿದ್ದರು. ಅವರ ನಿಧನದ ಬಳಿಕ ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಘೋಷಣೆಯಾಗಲಿದೆ.












Click it and Unblock the Notifications