ಗೋವಾ; ರಾಹುಲ್ ಗಾಂಧಿ ಮುಂದೆ ಅಭ್ಯರ್ಥಿಗಳ ಪಕ್ಷ ನಿಷ್ಠೆ ಪ್ರತಿಜ್ಞೆ!
ಪಣಜಿ, ಜನವರಿ 31; ಗೋವಾ ವಿಧಾನಸಭೆ ಚುನಾವಣೆ ಕಣ ಅಂತಿಮಗೊಂಡಿದೆ. 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷ ನಿಷ್ಠೆಯ ಪ್ರತಿಜ್ಞೆ ಮಾಡಲಿದ್ದಾರೆ. ಅಚ್ಚರಿ ಎನಿಸಿದರೂ ಇದು ಗೋವಾ ಕಾಂಗ್ರೆಸ್ ಪಾಲಿಗೆ ಅಗತ್ಯವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಒಂದು ದಿನದ ಭೇಟಿಯ ವೇಳೆ ಅವರು ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಗೋವಾದ 40 ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಅವರಿಗೆ 3 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಬುಧವಾರದಂದುರಾಹುಲ್ ಗಾಂಧಿ ಮುಂದೆ ನಿಷ್ಠೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಿದ್ದಾರೆ. ಚುನಾವಣೆಯ ನಂತರ ಪಕ್ಷಾಂತರ ಮಾಡುವುದಿಲ್ಲ ಎಂದು ಭರವಸೆ ನೀಡಲಿದ್ದಾರೆ. ಇದೊಂದು ಹೊಸ ರಾಜಕೀಯ ನಡೆಯಾಗಿದೆ.

ಪ್ರತಿಜ್ಞೆಗೆ ಕಾರಣವೇನು?; 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 17 ಶಾಸಕರು ಆಯ್ಕೆಯಾದರು, ಗೋವಾದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21.
ಆದರೆ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ವಿಫಲವಾಯಿತು. ಇದಕ್ಕೆ ಪ್ರಮುಖ ಕಾರಣ ಪಕ್ಷಾಂತರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಆಯ್ಕೆಯಾದ 17 ಶಾಸಕರ ಪೈಕಿ ಈಗ ಪಕ್ಷದಲ್ಲಿರುವುದು ಕೇವಲ ಇಬ್ಬರು ಮಾತ್ರ.
ಆದ್ದರಿಂದ ಅಭ್ಯರ್ಥಿಗಳಿಂದ ಪಕ್ಷ ನಿಷ್ಠೆಯ ಪ್ರತಿಜ್ಞೆ ಮಾಡಿಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್‌ಗೆ ಮತ ಹಾಕುವುದು ವ್ಯರ್ಥವಾಗುವುದಿಲ್ಲ ಮತ್ತು ಚುನಾಯಿತ ಪ್ರತಿನಿಧಿಗಳು ಚುನಾಯಿತರಾದ ನಂತರ ಪಕ್ಷಾಂತರ ಮಾಡುವುದಿಲ್ಲ ಎಂಬ ಭರವಸೆಯನ್ನು ಪಕ್ಷವು ರಾಜ್ಯದ ಜನರಿಗೆ ನೀಡಲು ಬಯಸುತ್ತದೆ. ಇದಕ್ಕಾಗಿ ಈ ತಂತ್ರ ಅನುಸರಿಸಲಾಗುತ್ತಿದೆ
2019ರಲ್ಲಿ ಗೋವಾ ವಿಧಾನಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಬಿಜೆಪಿ ಸೇರಿದಂತೆ ಬೇರೆ-ಬೇರೆ ಪಕ್ಷಕ್ಕೆ ಹೋದರು. ವಿಧಾನಸಭೆಯಲ್ಲಿ ಪಕ್ಷದ ಬಲ ಕುಸಿದು ಹೋಯಿತು. ಆದ್ದರಿಂದ ಚುನಾವಣೆಯ ನಂತರವೂ ಜನರು ಮತ್ತು ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಎಲ್ಲಾ ಅಭ್ಯರ್ಥಿಗಳು ಪ್ರತಿಜ್ಞೆ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಈ ತಿಂಗಳ ಆರಂಭದಲ್ಲಿ ದೇವಾಲಯ, ಚರ್ಚ್ ಮತ್ತು ದರ್ಗಾದಲ್ಲಿ ನಿಷ್ಠೆಯ ಪ್ರತಿಜ್ಞೆಯನ್ನು ಮಾಡಿದ್ದಾರೆ ಮತ್ತು ಚುನಾವಣೆಯ ನಂತರ ತಾವು ಪಕ್ಷಾಂತರ ಮಾಡುವುದಿಲ್ಲ ಎಂದು ಮತದಾರರಿಗೆ ಮನವರಿಕೆ ಮಾಡಲು ರಾಹುಲ್ ಗಾಂಧಿಯ ಮುಂದೆ ಮತ್ತೊಮ್ಮೆ ಪ್ರತಿಜ್ಞೆ ಮಾಡಲಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಪಕ್ಷಾಂತರದ ಕುರಿತು ಮಾತನಾಡಿದ್ದಾರೆ, "ಶಾಸಕರನ್ನು ಪಕ್ಷಾಂತರ ಮಾಡಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ. 2017ರಲ್ಲಿ ಏನಾಯಿತು ಎಂಬುದು ನಮಗೆ ತಿಳಿದಿದೆ. ಆದ್ದರಿಂದ ನಮಗೆ ಸ್ಪಷ್ಟ ಬಹುಮತ ನೀಡುವಂತೆ ನಾವು ಗೋವಾ ಜನತೆಗೆ ಮನವಿ ಮಾಡುತ್ತೇವೆ" ಎಂದು ಹೇಳಿದರು.
ಭಾನುವಾರ ಗೋವಾದಲ್ಲಿ ಚುನಾವಣೆ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಬೇರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಗೋವಾದಲ್ಲಿ ಸ್ಥಿರ ಸರ್ಕಾರ ರಚಿಸಲು ಬಂದಿಲ್ಲ, ಕೆಲವು ಪಕ್ಷಗಳು ರಾಷ್ಟ್ರೀಯ ಪಕ್ಷವಾಗಲು ಬಯಸುತ್ತವೆ, ಆದ್ದರಿಂದ ಅವರು ತಮ್ಮ ಅರ್ಹತೆ ಉಳಿಸಲು ಗೋವಾದಿಂದ ಕೆಲವು ಮತಗಳನ್ನು ಸಂಗ್ರಹಿಸಲು ಇಲ್ಲಿಗೆ ಬಂದಿದ್ದಾರೆ" ಎಂದು ಟಿಎಂಸಿ ಮತ್ತು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ಬಿಜೆಪಿ ಗೋಲ್ಡನ್ ಗೋವಾ ನಿರ್ಮಿಸಲು ಬಯಸುತ್ತಿರುವಾಗ ಗಾಂಧಿ ಕುಟುಂಬವು ಗೋವಾವನ್ನು ರಜೆಯ ತಾಣವಾಗಿ ಮಾತ್ರ ಬಳಸುತ್ತದೆ. ಗೋವಾದ ಜನರ ಮುಂದೆ ಎರಡು ಆಯ್ಕೆಗಳಿವೆ. ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ" ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು.
ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಎಪಿ ಪಕ್ಷ, "ಒಮ್ಮೆ ಚುನಾಯಿತರಾದ ನಂತರ ಪಕ್ಷಾಂತರ ಮಾಡಲು ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ. ಗೋವಾದಲ್ಲಿ ತಾವೊಬ್ಬರೇ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಹೀಗಾಗಿ ಅವರು 2017ರಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಜೆಪಿ ಸೇರಲು ಬೆಂಬಲ ನೀಡುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.












Click it and Unblock the Notifications