ನೋಯ್ಡಾ: ಮೂವರು ವೇಶ್ಯೆಯರ ಮೇಲೆ 9 ಮಂದಿಯಿಂದ ಅತ್ಯಾಚಾರ
ನೋಯ್ಡಾ, ಜೂನ್ 19: ಫಾರ್ಮ್ ಹೌಸ್ ಒಂದರಲ್ಲಿ ಮೂವರು ಲೈಂಗಿಕ ಕಾರ್ಯಕರ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ.
ಒಂಬತ್ತು ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಆರೋಪಿಗಳು ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದಾರೆ. ಮತ್ತೊಬ್ಬ ಕ್ಯಾಬ್ ಚಾಲಕ ಕೂಡ ಸೇರಿದ್ದಾನೆ. ಬುಧವಾರ ಬೆಳಿಗ್ಗೆ 5 ಗಂಟೆಗೆ ಈ ಬಗ್ಗೆ ತಮಗೆ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರಾದ ದೂರುದಾರ ಮಹಿಳೆ ಮತ್ತು ಆಕೆಯ ಇಬ್ಬರು ಸ್ನೇಹಿತರು ಮಂಗಳವಾರ ರಾತ್ರಿ ದೆಹಲಿಯ ಲಾಜ್‌ಪತ್ ಮೆಟ್ರೋ ನಿಲ್ದಾಣದ ಬಳಿ ಗ್ರಾಹಕರಿಗಾಗಿ ಕಾದಿದ್ದರು. ರಾತ್ರಿ 11.30ರ ವೇಳೆಗೆ ಓಲಾ ಕ್ಯಾಬ್ ಒಂದರಲ್ಲಿ ಇಬ್ಬರು ಪುರುಷರು ಬಂದರು.

ವ್ಯವಹಾರ ಕುದುರಿಸಿದ ಅವರು ಒಬ್ಬರಿಗೆ ಮೂರು ಸಾವಿರ ರೂಪಾಯಿ ನೀಡುವುದಾಗಿ ಮಾತುಕತೆ ನಡೆಸಿದರು. ಮೂರು ಸಾವಿರ ರೂಪಾಯಿ ಮುಂಗಡ ಕೊಟ್ಟು ಅವರನ್ನು ನೋಯಿಡಾ ಸೆಕ್ಟರ್ 18ಗೆ ಬರಬೇಕು ಎಂದರು. ಅದಕ್ಕೆ ಒಪ್ಪಿ ಕಾರಿನಲ್ಲಿ ಕುಳಿತ ವೇಶ್ಯೆಯರನ್ನು ಹೇಳಿದ ಸ್ಥಳಕ್ಕೆ ಬದಲಾಗಿ ಸೆಕ್ಟರ್ 135ನಲ್ಲಿ ಇರುವ ಫಾರ್ಮ್ ಹೌಸ್ ಒಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಇನ್ನೂ ಏಳು ಮಂದಿ ಪುರುಷರು ಬಂದರು.
ಆಗ ಪ್ರತಿರೋಧ ಒಡ್ಡಿದ ವೇಶ್ಯೆಯರು ತಾವು ದೆಹಲಿಗೆ ವಾಪಸ್ ಹೋಗಬೇಕೆಂದು ಕ್ಯಾಬ್‌ನಲ್ಲಿದ್ದ ವ್ಯಕ್ತಿಗಳಿಗೆ ಹೇಳಿದರು. ಆದರೆ, ಅದಕ್ಕೆ ಕಿವಿಗೊಡದ ಒಂಬತ್ತೂ ಮಂದಿ ಅವರ ಮೇಲೆ ಅತ್ಯಾಚಾರ ಎಸಗಿದರು. ಅವರು ಬೇಡಿಕೊಂಡ ಬಳಿಕ ಕೊನೆಗೆ ಆರೋಪಿಗಳಲ್ಲಿ ಒಬ್ಬಾತ ಬೆಳಗಿನ ಜಾವ ಐದು ಗಂಟೆಗೆ ಅವರನ್ನು ಮುಖ್ಯರಸ್ತೆಯ ಸಮೀಪ ಬಿಟ್ಟುಬಂದ. ಅಲ್ಲಿಂದ ಅವರು ಪೊಲೀಸರ ತುರ್ತು ಸಂಪರ್ಕ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಿದರು ಎಂದು ಗೌತಮ ಬುದ್ಧನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಕೃಷ್ಣ ತಿಳಿಸಿದ್ದಾರೆ.
ಅವರ ಮಾಹಿತಿ ಅನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅವರು ನೀಡಿದ ದೂರಿನ ಅನ್ವಯ ಸಾಮೂಹಿಕ ಅತ್ಯಾಚಾರ (ಐಪಿಸಿ ಸೆಕ್ಷನ್ 376ಡಿ) ಮತ್ತು ಉದ್ದೇಶಪೂರ್ವಕವಾಗಿ ಘಾಸಿ ಮಾಡುವುದು (ಸೆಕ್ಷನ್ 323) ಪ್ರಕರಣಗಳನ್ನು ದಾಖಲಿಸಿಕೊಂಡರು.
ತಮ್ಮ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು ಅತ್ಯಾಚಾರ ನಡೆಸಿದ್ದಲ್ಲದೆ, ತಮಗೆ ನೀಡಿದ್ದ ಮುಂಗಡ ಹಣವನ್ನೂ ಕಿತ್ತುಕೊಂಡರು ಎಂದು ಅವರು ದೂರಿದ್ದಾರೆ.
ಪ್ರಕರಣ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ. ಕ್ಯಾಬ್ ಚಾಲಕ ಸೇರಿದಂತೆ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಲವಲೇಶ್ ಯಾದವ್ ಫಾರ್ಮ್ ಹೌಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಫಾರ್ಮ್ ಹೌಸ್ ದೆಹಲಿಯ ಮೋಟಾರ್ ಟ್ರಾನ್ಸ್‌ಪೋರ್ಟ್ ಇಲಾಖೆಯ ಅಧಿಕಾರಿಯೊಬ್ಬರಿಗೆ ಸೇರಿದ್ದಾಗಿದೆ.












Click it and Unblock the Notifications