'ಲವ್ ಜಿಹಾದ್' ವಿವಾದದಲ್ಲಿ ಯೋಗಿ ಆದಿತ್ಯಾನಾಥ್
ನವದೆಹಲಿ, ಆ.28: ಸಂಸತ್ತಿನಲ್ಲಿ ವಿವಾದಾತ್ಮಕ ಭಾಷಣ ಮಾಡಿದ ಖ್ಯಾತಿ ಬೆನ್ನ ಹಿಂದೆ ಹೊತ್ತಿರುವ ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ್ ಅವರು ಈಗ ಲವ್ ಜಿಹಾದ್ ವಿರುದ್ಧ ನೀಡಿರುವ ಹೇಳಿಕೆ ಅನೇಕರನ್ನು ಕೆರಳಿಸಿದೆ.
ಯೋಗಿ ಆದಿತ್ಯಾನಾಥ್ ಅವರ ಹೇಳಿಕೆ ಈಗ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗದ ನಾಯಕರನ್ನು ಕೆರಳಿಸಿದೆ. ಯೋಗಿ ಆದಿತ್ಯಾನಾಥ್ ಅವರು ವಿಡಿಯೋವೊಂದರಲ್ಲಿ ಮಾತನಾಡುತ್ತಾ 'ಅವರು ಒಬ್ಬ ಹಿಂದು ಹುಡುಗಿಯನ್ನು ತೆಗೆದುಕೊಂಡರೆ, ನಾವು 100 ಹುಡುಗಿಯನ್ನು ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ. ಸುಮಾರು ಏಳು ವರ್ಷಗಳ ಹಿಂದೆ ಅಜಮ್ ಘರ್ ನ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ ಭಾಷಣ ಇದಾಗಿದೆ ಎಂದು ತಿಳಿದು ಬಂದಿದೆ.
ಜೊತೆಗೆ ನಮ್ಮ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಪ್ರೇಮಿಸಿ ಮದುವೆಯಾಗಬೇಕು ನಂತರ ಅವರನ್ನು ಹಿಂದೂ ಆಗಿ ಮತಾಂತರ ಮಾಡಿ. ಹಿಂದೂ ಧರ್ಮಕ್ಕೆ ಮತಾಂತರವಾಗುವ ಯಾವುದೇ ಕೋಮಿನವರನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಆದಿತ್ಯಾನಾಥ್ ಅವರು ಅನೇಕ ಬೆಂಬಲಿಗರ ಮುಂದೆ ನೀಡಿದ ಈ ಹೇಳಿಕೆ ಪ್ರಚೋದನಕಾರಿ ಸಂದೇಶ ರವಾನಿಸಿದಂತೆ ಆಗಿದೆ. ಹಿಂದೂ ಹೆಣ್ಣುಮಕ್ಕಳನ್ನು ಸಮಾಜ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಅವರಿಗೆ ಸೂಕ್ತ ಗೌರವ ಸಿಗಬೇಕಿದೆ ಎಂದಿದ್ದಾರೆ.
ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಧ್ಯಮಗಳು ದನಿ ಎತ್ತುತ್ತಿಲ್ಲ ಏಕೆ, ರಾಷ್ಟ್ರೀಯ ಕ್ರೀಡಾಪಟುವೊಬ್ಬರ ಲವ್ ಜಿಹಾದ್ ಪ್ರಕರಣ ನಮ್ಮ ಕಣ್ಮುಂದೆ ಇದೆ. ಸರಿಯಾದ ನ್ಯಾಯ ಸಿಗಬೇಕಿದೆ ಎಂದಿದ್ದಾರೆ.
ಆದರೆ, ವಿಡಿಯೋದಲ್ಲಿ ನೀಡಿರುವ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಆದಿತ್ಯಾನಾಥ್, ನಾನು ಯಾವುದೇ ಸ್ಪಷ್ಟನೆ ನೀಡಬೇಕಾಗಿಲ್ಲ ಎಂದಿದ್ದಾರೆ. ಯೋಗಿ ಆದಿತ್ಯಾನಾಥ್ ಅವರ ಹೇಳಿಕೆಯನ್ನು ಖಂಡಿಸಿರುವ ಸಮಾಜವಾದಿ ಪಕ್ಷ ಈ ಬಗ್ಗೆ ಬಿಜೆಪಿಯಲ್ಲಿ ಸ್ಪಷ್ಟನೆ ಕೇಳಿದೆ. ಮುಸ್ಲಿಂ ಮೌಲ್ವಿಗಳು ಕೂಡಾ ಬಿಜೆಪಿ ಸಂಸದನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಹಿಂದೆ ಸಂಸತ್ತಿನಲ್ಲಿ ಮಾತನಾಡುತ್ತಾ, ಪಾಕಿಸ್ತಾನದ ಪರವಾಗಿ ಕಾಂಗ್ರೆಸ್ ನಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಆದಿತ್ಯಾನಾಥ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications