ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ
ನವದೆಹಲಿ, ಆಗಸ್ಟ್ 14: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಗಾಥೆಯ ಕೃತಿ 'ಯೋಗಿ ಆದಿತ್ಯನಾಥ: ದಿ ರೈಸ್ ಆಫ್ ಎ ಸ್ಯಾಫ್ರೋನ್ ಸೋಷಿಯಲಿಸ್ಟ್' ದೇಶದ ಅತಿ ಹೆಚ್ಚು ಮಾರಾಟ ಕಂಡ ಪುಸ್ತಕಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
ಲಕ್ನೋದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ಈ ಪುಸ್ತಕ ಬರೆದಿದ್ದು, ಉತ್ತರಾಖಂಡದ ಚಿಕ್ಕ ಹಳ್ಳಿಯಿಂದ ಗೋರಖನಾಥ ದೇವಸ್ಥಾನ, ಸಂಸತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವವರೆಗಿನ ಯೋಗಿ ಆದಿತ್ಯನಾಥ ಅವರ ಪಯಣದ ಕುರಿತು ಮಾಹಿತಿಯನ್ನು ಒಳಗೊಂಡಿದೆ.
ಯೋಗಿ ಆದಿತ್ಯನಾಥ ಅವರ ರಾಜಕೀಯ ಪ್ರವೇಶದ ಮುಂಚಿನ ಜೀವನ, ಅವರ ನಂಬಿಕೆಗಳು ಮತ್ತು ರಾಜಕೀಯ ಪ್ರವೇಶಕ್ಕೆ ಕಾರಣವಾದ ಅಂಶಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಿದೆ.

ರಾಜಕೀಯ ಚರ್ಚೆಗಳಲ್ಲಿ ಕೇಂದ್ರ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಯೋಗಿ ಆದಿತ್ಯನಾಥ್ ಅವರ ರಾಜಕೀಯೇತರ ಜೀವನದ ಮತ್ತೊಂದು ವ್ಯಕ್ತಿತ್ವದ ಮತ್ತು ಜನರಿಗೆ ಹೆಚ್ಚು ಪರಿಚಿತವಾಗಿರದ ಘಟನೆಗಳ ಕುರಿತು ಇದು ಬೆಳಕು ಚೆಲ್ಲಿದೆ.
2017ರ ನವೆಂಬರ್ 26ರಂದು ನವದೆಹಲಿಯಲ್ಲಿ ನಡೆದ ಟೈಮ್ಸ್ ಸಾಹಿತ್ಯ ಉತ್ಸವದ ವೇಳೆ ಈ ಪುಸ್ತಕ ಬಿಡುಗಡೆಯಾಗಿತ್ತು. ರಾಜಕೀಯ ವ್ಯಕ್ತಿಗಳ ಕುರಿತಾದ ಕೃತಿಗಳಲ್ಲಿ ಈ ಪುಸ್ತಕ ಅತ್ಯುತ್ತಮ ಮಾರಾಟ ಕಂಡಿದೆ.












Click it and Unblock the Notifications