ಕಡ್ಡಾಯ ರಜೆಯ ಮೇಲಿರುವ ಅಲೋಕ್ ಮತ್ತೆ ಆಗುವರೆ ಸಿಬಿಐ ಚೀಫ್?
ಬೆಂಗಳೂರು, ನವೆಂಬರ್ 29 : ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆಂಬ ಕಾರಣಕ್ಕಾಗಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ಸ್ಥಾನ, ಮಾನವನ್ನು ಮರಳಿ ಗಳಿಸುತ್ತಾರಾ? ಸರ್ವೋಚ್ಚ ನ್ಯಾಯಾಲಯ ಇಂದು ನಿರ್ಧರಿಸಲಿದೆ.
ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದ ಸಮಿತಿಯಿಂದ ಮಾತ್ರ ಅವರನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯ. ಆ ಸಮಿತಿಯ ಪರವಾನಗಿ ಇಲ್ಲದೆ ಅವರನ್ನು ಕಡ್ಡಾಯ ರಜಾದ ಮೇಲೆ ಕಳಿಸಲು ಹೇಗೆ ಸಾಧ್ಯ. ಅವರನ್ನು ರಜೆಯ ಮೇಲೆ ಮನೆಗೆ ಕಳಿಸಲು ಯಾವ ಆಧಾರವೂ ಇಲ್ಲ ಎಂದು ಹಿರಿಯ ವಕೀಲ ಫಾಲಿ ನಾರಿಮನ್ ಅವರು ವಾದಿಸಿದ್ದಾರೆ.
ಭಾರತದ ಪ್ರಧಾನಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರಿರುವ ಸಮಿತಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ ನಿರ್ದೇಶಕರನ್ನು ನೇಮಿಸುತ್ತದೆ. ಆದರೆ, ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸುವಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಪಡೆದಿರಲಾಗಿರಲಿಲ್ಲ.

ಒಂದು ವೇಳೆ ಸಿಬಿಐ ನಿರ್ದೇಶಕರು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದರೆ? ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ಕೇಳಿದಾಗ, ಫಾಲಿ ನಾರಿಮನ್ ಅವರು, ಕೇಂದ್ರ ಮೊದಲು ಸಮಿತಿಯನ್ನು ಸಂಪರ್ಕಿಸಬೇಕು ಅಥವಾ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಬೇಕು ಎಂದು ವಾದಿಸಿದರು.
ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರು ಪರಸ್ಪರ ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪ ಹೊರಿಸಿದ ನಂತರ ಮಧ್ಯ ಪ್ರವೇಶಿಸಿದ್ದ ಕೇಂದ್ರ ಸರಕಾರ ಇಬ್ಬರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳಿಸಿತ್ತು. ಅಲ್ಲದೆ, ಹಂಗಾಮಿ ನಿರ್ದೇಶಕರನ್ನು ನೇಮಕ ಮಾಡಿ, ಅವರ ಮೂಲಕ, ಹಲವಾರು ಅಧಿಕಾರಿಗಳನ್ನು ಸಾರಾಸಗಟಾಗಿ ವರ್ಗಾವಣೆ ಮಾಡಿತ್ತು.
ಅಲೋಕ್ ವರ್ಮಾ ಅವರ ಮೇಲಿನ ದೂರಿನ ತನಿಖೆ ಮಾಡಲು ಕೇಂದ್ರ ಜಾಗೃತ ದಳಕ್ಕೆ (ಸಿವಿಸಿ) ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸಿವಿಸಿ ನೀಡಿದ ವರದಿಗೆ ಪ್ರತಿಯಾಗಿ ಉತ್ತರ ನೀಡಲು ಅಲೋಕ್ ವರ್ಮಾ ಅವರಿಗೆ ಅವಕಾಶ ನೀಡಲಾಗಿತ್ತು. ಸೆಂಟ್ರಲ್ ವಿಜಿಯನ್ಸ್ ಕಮಿಟಿಗೆ ಅಲೋಕ್ ವರ್ಮಾ ಅವರು ನೀಡಿದ ಪ್ರತಿಕ್ರಿಯೆ ಮಾಧ್ಯಮಗಳಿಗೆ ಸೋರಿಕೆಯಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು.












Click it and Unblock the Notifications