ಮನೆಕೆಲಸದವಳ ಕೊಂದ ಸಂಸದನ ಪತ್ನಿ
ನವದೆಹಲಿ, ನ.5: ಬಹುಜನ ಸಮಾಜವಾದಿ ಪಕ್ಷದ ಸಂಸದ ಧನಂಜಯ್ ಸಿಂಗ್ ಅವರ ಪತ್ನಿಯನ್ನು ನವದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಿಎಸ್ ಪಿ ಸಂಸದ ಧನಂಜಯ್ ಸಿಂಗ್ ಅವರ ಪತ್ನಿ ಜಾಗೃತಿ ಸಿಂಗ್ ಅವರು ಮನೆ ಕೆಲಸದಾಕೆ ಮೇಲೆ ನಿರಂತರವಾಗಿ ಹಲ್ಲೆ ನಡೆಸಿ ಕೊಂದಿರುವ ಎಂಬ ಆರೋಪ ಹೊತ್ತಿದ್ದಾರೆ. ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ನೆಲೆಸಿದ್ದ ಮನೆಕೆಲಸದಾಕೆ ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ್ದಳು.
ಈ ಸಂಬಂಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಬಿಎಸ್ ಪಿ ಸಂಸದ ಧನಂಜಯ್ ಅವರ ಪತ್ನಿ ಜಾಗೃತಿ ಅವರು ಮನೆಕೆಲಸದಾಕೆ ಮೇಲೆ ಕಳೆದ 10 ತಿಂಗಳಿನಿಂದ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ಆರೋಪಗಳನ್ನು ಸಂಸದ ಧನಂಜಯ್ ತಳ್ಳಿ ಹಾಕಿದ್ದಾರೆ. ದೆಹಲಿ ಪೊಲೀಸರು ತನಿಖೆ ಮುಂದುವರೆಸಿದ್ದು ಜಾಗೃತಿ ಅವರ ವಿಚಾರಣೆ ಜಾರಿಯಲ್ಲಿದೆ.

ಸಂಸದ ಧನಂಜಯ್ ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಿನ್ನೆ ಬೆಳಗ್ಗೆಯೇ ಮೃತಪಟ್ಟಿದ್ದರೂ ಪೊಲೀಸರಿಗೆ ಯಾರೂ ಮಾಹಿತಿ ನೀಡಿರಲಿಲ್ಲ. ರಾತ್ರಿ ವೇಳೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಬಂದು ನೋಡಿದರೆ ಮಹಿಳೆಯ ತಲೆ, ಮೈ ಮೇಲೆ ಗಾಯದ ಗುರುತುಗಳಾಗಿದ್ದು, ಆಕೆಗೆ ಕಿರುಕುಳ ನೀಡಿರುವುದರಿಂದ ಈ ಸಾವು ಸಂಭವಿಸಿದೆ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.
ಮನೆ ಕೆಲಸದಾಕೆ ಸಾವಿನ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟ ಸಂಸದನ ಪತ್ನಿ ಜಾಗೃತಿ, ಭಾನುವಾರ ಮನೆ ಕೆಲಸಕ್ಕೆ ಬಂದಿದ್ದ ಮಹಿಳೆ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಸಂಸದ ಧನಂಜಯ್ ಕೂಡಾ ಪತ್ನಿ ಬಂಧನ ನಂತರ ಹೇಳಿಕೆ ನೀಡಿ ನಾನು ಹಾಗೂ ಜಾಗೃತಿ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೆವು ಹೀಗಾಗಿ ಒಟ್ಟಿಗೆ ವಾಸಿಸುತ್ತಿರಲಿಲ್ಲ. ನಾನು ಬೇರೆಡೆ ವಾಸಿಸುತ್ತಿದ್ದೇನೆ. ಕಳೆದ 10 ತಿಂಗಳಿನಿಂದ ಆ ಮಹಿಳೆ ನನ್ನ ಪತ್ನಿಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆ ಮೇಲೆ ದೌರ್ಜನ್ಯ ನಡೆಸಿರಬಹುದು ಎಂದು ಹೇಳಿದ್ದಾರೆ.












Click it and Unblock the Notifications