ದೆಹಲಿ ವಿಧಾನಸಭೆಯಿಂದ ದಿನದ ಮಟ್ಟಿಗೆ ಮೂವರು ಬಿಜೆಪಿ ಶಾಸಕರ ಅಮಾನತು
ನವದೆಹಲಿ, ಮಾರ್ಚ್ 28: ದೆಹಲಿ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಆದೇಶ್ ಕುಮಾರ್ ನೀಡಿದ ಅವಹೇಳನಕಾರಿ ಹೇಳಿಕೆಯು ತೀವ್ರ ಸದ್ದು-ಗದ್ದಲಕ್ಕೆ ಕಾರಣವಾಯಿತು.
ಬಿಜೆಪಿ ನಾಯಕರ ಹೇಳಿಕೆಗೆ ಕೆಂಡವಾದ ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟನೆಗೆ ಮುಂದಾದರು. ಇದರ ಮಧ್ಯೆ ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಸೋಮವಾರ ಮೂವರು ಬಿಜೆಪಿ ಶಾಸಕರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ.
ಶಾಸಕ ಅನಿಲ್ ಬಾಜ್‌ಪೇಯ್, ಜಿತೇಂದರ್ ಮಹಾಜನ್ ಮತ್ತು ಅಜಯ್ ಮಹಾವರ್ ಅವರನ್ನು ಸಭಾಪತಿಯವರು ಕುಳಿತುಕೊಳ್ಳುವಂತೆ ಮನವಿ ಮಾಡಿದರೂ ಅವರು ಬೆಂಚ್‌ಗಳ ಮೇಲೆ ನಿಂತುಕೊಂಡರು. ತದನಂತರ ಅವರನ್ನು ಅಮಾನತುಗೊಳಿಸಿ ಹೊರಹೋಗುವಂತೆ ಸೂಚಿಸಲಾಯಿತು.

ಎರಡು ಬಾರಿ ಕಲಾಪ ಮುಂದೂಡಿಕೆ:
ಸೋಮವಾರ ಆರಂಭಗೊಂಡ ದೆಹಲಿ ವಿಧಾನಸಾ ಕಲಾಪವು ಎರಡು ಬಾರಿ 15 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಗಿತ್ತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಅಧ್ಯಕ್ಷ ಆದೇಶ್ ಕುಮಾರ್ ನೀಡಿರುವ ಹೇಳಿಕೆ ವಿರೋಧಿಸಿ ಪ್ರತಿಭಟನೆಗೆ ಮುಂದಾದರು. ಸದನದ ಬಾವಿಗಿಳಿದು ಬಿಜೆಪಿ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ ಹೇಳಿಕೆಗಾಗಿ ಬಿಜೆಪಿಯ ಗುಪ್ತಾ ಕ್ಷಮೆಯಾಚಿಸಬೇಕು ಎಂದು ಆಪ್ ಶಾಸಕ ಮೊಹಿಂದರ್ ಗೋಯೆಲ್ ಒತ್ತಾಯಿಸಿದರು.
"ಮುಖ್ಯಮಂತ್ರಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ದೆಹಲಿಯ ಬಿಜೆಪಿ ಅಧ್ಯಕ್ಷರ ವಿರುದ್ಧ ಸದನದಲ್ಲಿ ಖಂಡನಾ ನಿರ್ಣಯವನ್ನು ತರಬೇಕಾಗಿದೆ. ವಿರೋಧ ಪಕ್ಷದ ನಾಯಕರು ಕ್ಷಮೆಯಾಚಿಸಬೇಕು,'' ಎಂದರು.












Click it and Unblock the Notifications