ಹೊಸಬಾಂಬ್: ಕಾಂಗ್ರೆಸ್ ಸೋಲಿನ ಕಾರಣ ತೆರೆದಿಟ್ಟ ಪಿ.ಚಿದಂಬರಂ!
ನವದೆಹಲಿ, ನವೆಂಬರ್.18: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವಾ ಎನ್ನುವ ಪ್ರಶ್ನೆ ಪದೇ ಪದೆ ಹುಟ್ಟಿಕೊಳ್ಳುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆ ಮತ್ತು ಉಪ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಹಿರಿಯ ನಾಯಕರು ಪಕ್ಷದ ಸಂಘಟನೆ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟಿತ ಮತ್ತು ಸಾಂಸ್ಥಿಕ ಹೋರಾಟ ನಡೆಸಲಿಲ್ಲ ಎಂದು ಕೇಂದ್ರ ಮಾಜಿ ಸಚಿವ ಪಿ.ಚದಂಬರಂ ಆರೋಪಿಸಿದ್ದಾರೆ. ದೈನಿಕ್ ಭಾಸ್ಕರ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಮತ್ತಷ್ಟು ಕ್ಷೇತ್ರಗಳಿಗೆ ಕಾಂಗ್ರೆಸ್ ಸ್ಪರ್ಧಿಸಬೇಕಿತ್ತು ಎಂದು ಹೇಳಿದ್ದಾರೆ.
"ನನಗೆ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶದ ಬಗ್ಗೆ ಸಾಕಷ್ಟು ಆತಂಕವಾಗುತ್ತಿದೆ. ಕಾಂಗ್ರೆಸ್ ಪಕ್ಷವು ಸಂಘಟಿತ ಪ್ರದರ್ಶನ ನೀಡುವಲ್ಲಿ ಮತ್ತು ಕೆಳಮಟ್ಟದಿಂದ ಸಂಘಟಿತ ಹೋರಾಟ ತೋರುವಲ್ಲಿ ವಿಫಲವಾಗಿರುವುದು ಫಲಿತಾಂಶದಿಂದ ತಿಳಿದು ಬರುತ್ತದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್-ಆರ್ ಜೆಡಿ ಸೋಲಿಗೆ ಕಾರಣವೇನು?
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ. ಆರ್ಥಿಕ ಕುಸಿತ, ಹಣದುಬ್ಬರ ಸೇರಿದಂತೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾಕಷ್ಟು ಅಂಶಗಳಿದ್ದವು. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್ ಜೆಡಿ ಮೈತ್ರಿಕೂಟವು ಗೆಲ್ಲುವುದಕ್ಕೆ ಎಲ್ಲ ಸಾಧ್ಯತೆಗಳಿದ್ದವು. ಆದರೆ ತಪ್ಪು ಆಗಿದ್ದು ಎಲ್ಲಿ, ಮೈತ್ರಿಕೂಟದ ಸೋಲಿಗೆ ಕಾರಣವೇನು. ಈ ಬಗ್ಗೆ ಕಾಂಗ್ರೆಸ್ ಪರಾಮರ್ಶೆ ಮಾಡಿಕೊಳ್ಳುವ ಅಗತ್ಯತೆ ತುಂಬಾ ಇದೆ. ತುಂಬಾ ದಿನಗಳ ಬಳಿಕ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದನ್ನು ನಾವಿಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು" ಎಂದು ಪಿ.ಚಿದಂಬರಂ ಹೇಳಿದ್ದಾರೆ.

"ಸಂಘಟಿತ ಹೋರಾಟದ ಗೆಲುವು ಸಣ್ಣ ಪಕ್ಷಗಳಿಗೆ ಸಿಕ್ಕಿದೆ"
ಬಿಹಾರ ವಿಧಾನಸಭಾ ಚುನಾವಣೆಯು ಸಾಕಷ್ಟು ಪಾಠಗಳನ್ನು ಕಲಿಸಿದೆ. ಸಂಘಟಿತ ಹೋರಾಟದಿಂದ ಗೆಲುವು ಸಾಧ್ಯ ಎನ್ನುವುದನ್ನು ಸಿಪಿಐ-ಎಂಎಲ್, ಎಐಎಂಐಎಂ ರೀತಿಯ ಸಣ್ಣ ಪಕ್ಷಗಳು ಸಾಬೀತುಪಡಿಸಿವೆ. ಬಿಜೆಪಿ ಮೈತ್ರಿಕೂಟಕ್ಕಿಂತ ವಿರೋಧ ಪಕ್ಷಗಳ ಮೈತ್ರಿಕೂಟವೇ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿವೆ. ಆದರೆ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದಕ್ಕೆ ನಾವು ಸಂಘಟಿತವಾಗಿ ಹೋರಾಡಬೇಕಿದೆ ಎಂದು ಚಿದಂಬರಂ ಸಲಹೆ ನೀಡಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದ್ದು ಎಲ್ಲಿ ಗೊತ್ತಾ?
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಚುನಾವಣಾಪೂರ್ವದಲ್ಲಿ ಮಾಡಿಕೊಂಡ ಒಪ್ಪಂದವೇ ಕಾರಣ ಎಂದು ಪಿ.ಚಿದಂಬರಂ ಆರೋಪಿಸಿದ್ದಾರೆ. ಬಿಹಾರದಲ್ಲಿ ಮತ್ತಷ್ಟು ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಬೇಕಿತ್ತು. ಆದರೆ ಬಿಜೆಪಿಯು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದು, ಪಕ್ಷಕ್ಕೆ ಹಿನ್ನಡೆಯಾಗಲು ಕಾರಣವಾಯಿತು. 20 ವರ್ಷಗಳಿಂದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾ ಬಂದಿರುವ 25 ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡಲಾಗಿತ್ತು. ಈ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಮೊದಲೇ ನಿರಾಕರಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಬಗ್ಗೆ ಕಪಿಲ್ ಸಿಬಲ್ ಟೀಕೆ
ಬಿಹಾರದ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಅನ್ನು "ಪರಿಣಾಮಕಾರಿ ಪರ್ಯಾಯ" ಎಂದು ಪರಿಗಣಿಸುವುದಿಲ್ಲ. ಪಕ್ಷವು ಸಂಘಟಿತ ಹೋರಾಟವನ್ನು ಪ್ರದರ್ಶಿಸುವಲ್ಲಿ ಹಿನ್ನಡೆ ಅನುಭವಿಸಿರುವುದೇ ಪಕ್ಷದ ಸೋಲಿಗೆ ಕಾರಣ ಎಂದು ಹಿರಿಯ ಮುಖಂಡ ಕಪಿಲ್ ಸಿಬಲ್ ಆರೋಪಿಸಿದ್ದರು.












Click it and Unblock the Notifications