ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?
ಶೀಲಾ ದೀಕ್ಷಿತ್ ಅವಧಿಯಲ್ಲಿ ನಡೆದ 400 ಕೋಟಿಯ ಹಗರಣ ಇದು. 'ಡಿಜೆಬಿ' ವ್ಯಾಪ್ತಿಗೆ ಬರದ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಗಳನ್ನು ಬೇಕಾಬಿಟ್ಟಿ ಬಾಡಿಗೆಗೆ ಪಡೆಯದಿದ್ದೇ ಈ ಹಗರಣದ ಮೂಲ.
ದೆಹಲಿ, ಮೇ 8: ಭಾನುವಾರ ದೆಹಲಿಯ ವಾಟರ್ ಟ್ಯಾಂಕರ್ ಸ್ಕ್ಯಾಮ್ ದೇಶದಾದ್ಯಂತ ಸದ್ದು ಮಾಡಿತ್ತು. ದೆಹಲಿ ಜಲ ಸಂಪನ್ಮೂಲ ಸಚಿವ ಕಪಿಲ್ ಶರ್ಮರ ಹುದ್ದೆ ಕಿತ್ತುಕೊಳ್ಳುವಲ್ಲಿಯೂ ಈ ಹಗರಣ ಕೆಲಸ ಮಾಡಿತ್ತು. ಅತ್ತ ಭ್ರಷ್ಟಾಚಾರ ವಿರೋಧಿ ಹೋರಾಟದ ಹೆಸರು ಹೇಳಿಕೊಂಡು ಬಂದ ಎಎಪಿ ಸರಕಾರಕ್ಕೂ ಇದು ನುಂಗಲಾರದ ತುತ್ತಾಗಿದೆ.[ಜ್ಯೋತಿಷ್ಯ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾತಕ ಏನು ಹೇಳುತ್ತದೆ?]
ಸದ್ಯ ಪಕ್ಷದೊಳಗಿನ ಹಲವು ಸುತ್ತಿನ ಆಂತರಿಕ ಕಚ್ಚಾಟದ ನಂತರ ಎಎಪಿಗೆ ಈ ಟ್ಯಾಂಕರ್ ಸ್ಕ್ಯಾಮ್ ಮಗ್ಗಲು ಮುಳ್ಳಾಗಿ ಪರಿಣಮಿಸಿದೆ. ಮುಖ್ಯವಾಗಿ ಅರವಿಂದ್ ಕೇಜ್ರಿವಾಲ್ ಮೇಲೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಮುಗಿ ಬಿದ್ದಿವೆ. ಇಲ್ಲಿಯವರಗೆ ಭ್ರಷ್ಟಾಚಾರ ಪ್ರಕರಣದ ಸಣ್ಣ ಎಳೆಯಲ್ಲೂ ಸಿಕ್ಕಿ ಬೀಳದಿರುವ ಎಎಪಿ ಸರಕಾರ ಈ ಬಾರಿ ಏನು ಮಾಡುತ್ತದೆ ಎನ್ನುವುದು ಅದರ ಭವಿಷ್ಯ ನಿರ್ಧರಿಸಲಿದೆ.[ಅರವಿಂದ್ ಕೇಜ್ರಿವಾಲ್ ಮೇಲೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ ಕಪಿಲ್ ಮಿಶ್ರಾ]
ಹಾಗಾದರೆ ಏನಿದು ವಾಟರ್ ಸ್ಕ್ಯಾಮ್? ತಿಳಿದುಕೊಳ್ಳಲು ಈ ವಿವರಗಳನ್ನು ಓದಿ

400 ಕೋಟಿಯ ಹಗರಣ
ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸುಮಾರು 400 ಕೋಟಿಯ ಹಗರಣ ಇದು. ದೆಹಲಿಯ ಜಲ ನಿಗಮದ ವ್ಯಾಪ್ತಿಗೆ ಬರದ ಪ್ರದೇಶಗಳಲ್ಲಿ ಜನತೆಗೆ ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಗಳನ್ನು ಬೇಕಾಬಿಟ್ಟಿ ಬಾಡಿಗೆಗೆ ಪಡೆಯದಿದ್ದೇ ಈ ಹಗರಣದ ಮೂಲ.

ಎಎಪಿ ಆಡಳಿತದಲ್ಲಿ ತನಿಖೆ
ದೆಹಲಿಯಲ್ಲಿ ಎಎಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಈ ಹಗರಣದ ತನಿಖೆಗೆ ಐದು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಯಿತು. ತನಿಖೆ ಪೂರ್ಣಗೊಂಡಾಗ ಒಟ್ಟು 400 ಕೋಟಿಯ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ತಮಗೆ ಇಷ್ಟ ಬಂದ ಸ್ಟೀಲ್ ಟ್ಯಾಂಕರ್ ಗಳನ್ನು ಸರಕಾರ ಬಾಡಿಗೆಗೆ ಪಡೆದಿದ್ದು ಬಹಿರಂಗವಾಗಿತ್ತು.[ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ : ತನಿಖೆ ಆರಂಭ]

ಕೇಜ್ರಿವಾಲ್ ಗೆ ಕಪಿಲ್ ಮಿಶ್ರಾ ಪತ್ರ
ಇದಾದ ಬೆನ್ನಿಗೆ ಮಿಶ್ರಾ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದು ಎಎಪಿ ಸಚಿವರೇ ಹಗರಣದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಹಗರಣದ ತನಿಖೆ ನಡೆಸಿದ ತಜ್ಞರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಈ ವರದಿಯನ್ನು ಸಲ್ಲಿಸಿದರು. ತಜ್ಞರು ಈ ಹಗರಣವನ್ನು ಸಿಬಿಐ ಅಥವಾ ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರದ ದಳದಿಂದ ತನಿಖೆ ಮಾಡಬೇಕು ಎಂದು ಹೇಳಿದ್ದರು.

ಪ್ರಕರಣ ಮುಚ್ಚಿ ಹಾಕುವ ಯತ್ನ
ಹಗರಣದಲ್ಲಿ ಕೆಲವು ಎಎಪಿ ಸಚಿವರೇ ಪಾಲ್ಗೊಂಡಿರುವುದರಿಂದ ಕೇಜ್ರಿವಾಲ್ ಹಗರಣವನ್ನೇ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಕಪಿಲ್ ಮಿಶ್ರಾ ಹೊರಿಸಿದ್ದರು. ತಮ್ಮ ಪತ್ರದಲ್ಲಿ ಹಗರಣದಲ್ಲಿ ಭಾಗಿಯಾದ ಸಚಿವರ ಹೆಸರನ್ನು ಬಹಿರಂಗ ಪಡಿಸಿದ್ದರಿಂದ ಕೇಜ್ರಿವಾಲ್ ತಮ್ಮನ್ನು ಸಂಪುಟದಿಂದ ಕಿತ್ತೊಗೆದಿದ್ದಾರೆ ಎಂದೂ ಮಿಶ್ರಾ ಆರೋಪಿಸಿದ್ದಾರೆ.[ಕೇಜ್ರಿವಾಲ್ ಮೇಲಿನ ತನಿಖೆಗೆ ಲೋಕಾಯುಕ್ತ ಬಾಗಿಲು ಬಡಿದ ಬಿಜೆಪಿ]

ಇನ್ನು ತಡ ಮಾಡುವುದಿಲ್ಲ
ಹಗರಣ ಸಂಬಂಧ ಕಳೆದ ಜೂನಿನಲ್ಲಿಯೇ ಎಸಿಬಿ ಶೀಲಾ ದೀಕ್ಷಿತ್ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿಕೊಂಡಿದೆ. ಇದೀಗ ಮಿಶ್ರಾ ಹಗರಣಕ್ಕೆ ಸಂಬಂಧಿಸಿದ ವಿವರಗಳನ್ನು ಪೊಲೀಸರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನಾನು ಇನ್ನು ತಡ ಮಾಡುವುದಿಲ್ಲ ಎಂದು ಹೇಳಿರುವ ಮಿಶ್ರಾ ಎಸಿಬಿಗೆ ಹೋಗಿ ದಾಖಲೆಗಳನ್ನು ನೀಡಿ ಬಂದಿದ್ದಾರೆ. ಜತೆಗೆ ಬಿಜೆಪಿ ಕೂಡಾ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.












Click it and Unblock the Notifications