ಬಿಜೆಪಿಗೆ ಮರಳಲು ಯಡಿಯೂರಪ್ಪಗೆ ಮೊದಲ ಆಹ್ವಾನ
ನವದೆಹಲಿ, ಡಿ.5 : ಬಿಜೆಪಿಗೆ ಮರಳುವಂತೆ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕದ ಬಿಜೆಪಿ ಘಟಕ ಮೊದಲ ಆಹ್ವಾನ ನೀಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಕರ್ನಾಟಕದ ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತು ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ನವೆದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭೇಟಿಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯದ ಎಲ್ಲಾ ನಾಯಕರ ಪರವಾಗಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. (ಯಡಿಯೂರಪ್ಪ ಕರೆತರಲು ದೆಹಲಿಯಲ್ಲಿ ಬಿಜೆಪಿ ಸಭೆ)

ಬಿ.ಎಸ್.ಯಡಿಯೂರಪ್ಪ ಸೇರ್ಪಡೆ ಕುರಿತು ಗುರುವಾರ ನಾವು ಮೊದಲ ಬಾರಿಗೆ ರಾಷ್ಟ್ರೀಯ ನಾಯಕರೊಂದಿಗೆ ವಿವರವಾದ ಚರ್ಚೆ ನಡೆಸಿದ್ದು, ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತು ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು. ಈ ಮೂಲಕ ಬಹಿರಂಗವಾಗಿ ಬಿಜೆಪಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಆರಂಭಿಸಿದೆ.
ರಾಜನಾಥ್ ಸಿಂಗ್ ಅವರಿಗೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಬಗ್ಗೆ ವಿವರಣೆ ನೀಡಿದ್ದೇವೆ. ಅನಂತ್ ಕುಮಾರ್, ಈಶ್ವರಪ್ಪ ಮತ್ತು ನಾನು ವೈಯಕ್ತಿಕವಾಗಿಯೂ ನಮ್ಮ ಅಭಿಪ್ರಾಯವನ್ನು ಅವರಿಗೆ ವಿವರಿಸಿದ್ದೇವೆ. ನಮ್ಮ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದ ರಾಜನಾಥ್ ಸಿಂಗ್ ಈ ಕುರಿತು ತ್ವರಿತವಾಗಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಯಡಿಯೂರಪ್ಪ ಭ್ರಷ್ಟರಲ್ಲ : ಬಿ.ಎಸ್.ಯಡಿಯೂರಪ್ಪ ಭ್ರಷ್ಟರಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಭ್ರಷ್ಟರನ್ನು ಪಕ್ಷಕ್ಕೆ ಮರಳಿ ಕರೆತರುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ವಿರುದ್ಧವಾಗಿ ಯಾವುದೇ ನ್ಯಾಯಾಲಯದಲ್ಲೂ ತೀರ್ಪು ಬಂದಿಲ್ಲ ಆದ್ದರಿಂದ ಅವರು ಭ್ರಷ್ಟರಲ್ಲ ಎಂದು ಅವರು ತಿಳಿಸಿದರು.
ಯಾವುದೇ ಆಹ್ವಾನ ಬಂದಿಲ್ಲ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಯಾರು ಅಧಿಕೃತವಾಗಿ ಆಹ್ವಾನಿಸಿಲ್ಲ ಎಂದು ಕೆಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಜೆಪಿ ಎನ್ ಡಿಗೆ ಬೆಂಬಲ ನೀಡಿ ಬರೆದಿರುವ ಪತ್ರಕ್ಕೆ ಇನ್ನು ಉತ್ತರ ಬಂದಿಲ್ಲ. ಆದ್ದರಿಂದ ಬಿಜೆಪಿಗೆ ಬಾಹ್ಯ ಬೆಂಬಲ ನೀಡಬೇಕೋ? ಅಥವ ಬಿಜೆಪಿಗೆ ಮರಳಬೇಕೋ? ಎಂದು ಇನ್ನು ತೀರ್ಮಾನ ಕೈಗೊಂಡಿಲ್ಲ.
ಡಿ.9ರಂದು ಬೆಂಗಳೂರಿನಲ್ಲಿ ಕೆಜೆಪಿ ಕಾರ್ಯಕಾರಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ಯಡಿಯೂರಪ್ಪ ಬಿಜೆಪಿಗೆ ಮರಳು ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ಯಾವುದೇ ಬಿಜೆಪಿ ನಾಯಕರು ಯಡಿಯೂರಪ್ಪ ಅವರಿಗೆ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿಲ್ಲ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications