ಮೀಸಲಾತಿ ಘೋಷಣೆಗೆ ಉ.ಪ್ರ. ಸರಕಾರಕ್ಕೆ ನಿಯಮದ ಪಾಠ ಹೇಳಿದ ಕೇಂದ್ರ
ನವದೆಹಲಿ, ಜುಲೈ 2: 17 ಇತರ ಹಿಂದುಳಿದ ಜಾತಿಯನ್ನು (ಒಬಿಸಿ) ಪರಿಶಿಷ್ಟ ಜಾತಿಗೆ ಸೇರಿಸಲು ಸಲ್ಲಿಸಿದ್ದ ಪ್ರಸ್ತಾವ 'ನಿಯಮಾವಳಿ ಸರಿಯಾಗಿಲ್ಲ' ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಹೇಳಿದೆ. ಈ ವಿಚಾರವನ್ನು ಸಂಸತ್ ನಲ್ಲಿ ಎತ್ತಿದ ವಿಪಕ್ಷ ಬಿಎಸ್ ಪಿಗೆ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಹೀಗೆ ಉತ್ತರಿಸಿದ್ದಾರೆ.
ಜೂನ್ 24ನೇ ತಾರೀಕು ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರಕಾರವು ಆದೇಶವೊಂದನ್ನು ಹೊರಡಿಸಿತ್ತು. ಒಬಿಸಿಗೆ ಸೇರುವ ಕಶ್ಯಪ್, ರಾಜ್ ಭರ್, ಧಿವರ್, ಬಿಂಡ್, ಕುಮ್ಹಾರ್, ಕಹರ್, ಕೇವತ್, ನಿಶಾದ್, ಭಾರ್, ಮಲ್ಹಾ, ಪ್ರಜಾಪತಿ, ಧೀಮರ್, ಬಾಥಂ, ತುರ್ಹಾ, ಮಾಂಝಿ ಹಾಗೂ ಮಚುವಾ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಕಮಿಷನರ್ ಗಳಿಗೆ ನಿರ್ದೇಶಿಸಿತ್ತು.
ಈ ನಡೆಯಿಂದ ಮೀಸಲಾತಿ ಸೌಲಭ್ಯ ದೊರೆಯುವಂತಾಗುತ್ತಿತ್ತು. ಅದು ಈಗ ನಡೆಯಲಿರುವ ಹನ್ನೆರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಾತ್ರವಲ್ಲ, ಮೂರು ವರ್ಷಗಳ ನಂತರ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಅನ್ವಯಿಸುತ್ತಿತ್ತು.

ಇದು 'ಅಸಾಂವಿಧಾನಿಕ' ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಇಂಥ ನಿರ್ಧಾರವನ್ನು ಕೇಂದ್ರ ಸರಕಾರ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂದು ಅವರು ಉತ್ತರ ನೀಡಿದ್ದಾರೆ. ಒಂದು ವೇಳೆ ಉತ್ತರಪ್ರದೇಶ ಸರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಿದ್ದರೆ ನಿಯಮ ಪಾಲನೆ ಮಾಡಬೇಕು. ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಬೇಕು. "ನಾವು ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
ಆದೇಶದ ಆಧಾರದಲ್ಲಿ ಜಾತಿ ಪ್ರಮಾಣಪತ್ರ ನೀಡದಂತೆ ಹೇಳಿದ ಅವರು, ಈ ವಿಚಾರ ಕೋರ್ಟ್ ಮೆಟ್ಟಿಲೇರಬಹುದು ಎಂದು ಎಚ್ಚರಿಸಿದ್ದಾರೆ. ಒಂದು ಜಾತಿಯ ಕ್ಯಾಟಗರಿಯನ್ನು ಒಂದರಿಂದ ಮತ್ತೊಂದಕ್ಕೆ ವರ್ಗಾಯಿಸುವ ಹಕ್ಕು ಇರುವುದು ಕೇಂದ್ರಕ್ಕೆ ಎಂದು ಹೇಳಿದ್ದಾರೆ. ಕಳೆದ ವಾರ ರಾಜ್ಯ ಸರಕಾರದ ತೀರ್ಮಾನ ಪ್ರಕಟಿಸುವ ವೇಳೆ ಯೋಗಿ ಆದಿತ್ಯನಾಥ್ ಸರಕಾರವು ಎರಡು ವರ್ಷಗಳ ಹಿಂದಿನ ಹೈ ಕೋರ್ಟ್ ಗಮನ ಸೆಳೆದಿದ್ದರ ಬಗ್ಗೆ ತಿಳಿಸಿತ್ತು.












Click it and Unblock the Notifications