ಆಪರೇಷನ್ ಗಂಗಾ: ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ದೆಹಲಿಯಲ್ಲಿ ಲ್ಯಾಂಡ್
ನವದೆಹಲಿ, ಫೆಬ್ರವರಿ 27: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಉಕ್ರೇನ್ ಈಗಾಗಲೇ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದೆ. ಈ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ ಇಂದು ಸಂಜೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
"ನಾವು ರೊಮೇನಿಯಾ ಮೂಲಕ ಬಂದಿದ್ದೇವೆ ಮತ್ತು ಅಲ್ಲಿನ ಜನರು ನಮಗಾಗಿ ಮನೆಯಲ್ಲಿ ಆಹಾರ ತಯಾರಿ ಮಾಡಿ ನೀಡಿದ್ದಾರೆ. ನಾವು ಎಲ್ವಿವ್‌ನಿಂದ ಹೊರಡುವವರೆಗೂ, ಪರಿಸ್ಥಿತಿಯು ಸಾಮಾನ್ಯವಾಗಿದೆ ಆದರೆ ಈಗ ಸಾಕಷ್ಟು ಅನಿಶ್ಚಿತವಾಗಿ ಕಾಣುತ್ತದೆ," ಎಂದು ಉಕ್ರೇನ್‌ನಿದ ಬಂದ ವಿದ್ಯಾರ್ಥಿ ಹೇಳಿದ್ದಾರೆ.
"ನಮ್ಮನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಕ್ಕಾಗಿ ನಾವು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇವೆ," ಎಂದು ಆಫರೇಷನ್ ಗಂಗಾ ಮೂಲಕ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಕರೆತರುವ ಭಾರತ ಸರ್ಕಾರದ ಯೋಜನೆಗೆ ಧನ್ಯವಾದ ಸಲ್ಲಿಸಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಮರಳಿ ಕರೆತರಲಾಗುತ್ತಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. "ನಾವು ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ತಂಡಗಳನ್ನು ಕಳುಹಿಸಿದ್ದೇವೆ. ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಎಂಇಎ ಕಂಟ್ರೋಲ್ ರೂಂ ಕೂಡ ಮಾಡಿದೆ," ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈಗಾಗಲೇ ಹೇಳಿದ್ದಾರೆ.
198 ಭಾರತೀಯ ಪ್ರಜೆಗಳು ಭಾರತಕ್ಕೆ ವಾಪಾಸ್
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಮೂಲಕ ನಾಲ್ಕನೇ ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್‌ನಿಂದ ನವದೆಹಲಿಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಈ ಹಿಂದೆ ಹೇಳಿದರು. 198 ಭಾರತೀಯ ಪ್ರಜೆಗಳು ಭಾರತಕ್ಕೆ ಹಿಂತಿರುಗುತ್ತಿದ್ದಾರೆ ಎಂದು ಜೈಶಂಕರ್ ಮಾಹಿತಿ ನೀಡಿದ್ದರು.
"ನಾಲ್ಕನೇ #ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್‌ನಿಂದ ಹೊರಟಿದೆ. 198 ಭಾರತೀಯ ಪ್ರಜೆಗಳು ದೆಹಲಿಗೆ ಹಿಂತಿರುಗುತ್ತಿದ್ದಾರೆ," ಎಂದು ಕೇಂದ್ರ ಸಚಿವ ಡಾ.ಎಸ್.ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಂದು ಬೆಳಿಗ್ಗೆ, ಬುಡಾಪೆಸ್ಟ್‌ನಿಂದ 240 ಭಾರತೀಯ ಪ್ರಜೆಗಳೊಂದಿಗೆ ಆಪರೇಷನ್ ಗಂಗಾ ಮೂರನೇ ವಿಮಾನವು ನವದೆಹಲಿಗೆ ಬಂದಿಳಿಯಿತು.
ರಷ್ಯಾ ಉಕ್ರೇನ್ ಯುದ್ಧ ಆರಂಭವಾದ ಬಳಿಕ ಉಕ್ರೇನ್‌ನ ವಾಯು ಮಾರ್ಗವನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಿಂದಾಗಿ ಭಾರತೀಯ ಸ್ಥಳಾಂತರಿಸುವ ವಿಮಾನಗಳು ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಕಾರ್ಯನಿರ್ವಹಿಸುತ್ತಿವೆ. "ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮನೆಗೆ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ತಮ್ಮ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
250 ಭಾರತೀಯರನ್ನು ಹೊತ್ತ ಎರಡನೇ ವಿಮಾನ ರೊಮೇನಿಯಾದ ಬುಕಾರೆಸ್ಟ್‌ನಿಂದ ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಏರ್ ಇಂಡಿಯಾ (AI)-192 ವಿಶೇಷ ವಿಮಾನ ಸೇವೆಯು ಬೆಳಗ್ಗೆ 3 ಗಂಟೆಗೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಆಪರೇಷನ್ ಗಂಗಾ' ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಕರೆತಂದಿದೆ.
"ಉಕ್ರೇನ್‌ನ ಅನೇಕ ಸ್ಥಳಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ, ನಾಗರಿಕರು ತಮ್ಮ ದೇಶವನ್ನು ಉಳಿಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿದ್ದಾರೆ. ನಾನು ಉಳಿದುಕೊಂಡಿದ್ದ ಸ್ಥಳದಲ್ಲಿ ಯುದ್ಧ ಆರಂಭವಾಗಿದೆ," ಎಂದು ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಯೊಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ. ಉಕ್ರೇನ್‌ನಿಂದ ಹಿಂದಿರುಗಿದ ಮತ್ತೊಬ್ಬ ವಿದ್ಯಾರ್ಥಿ, "ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಆದರೆ ಉಕ್ರೇನ್‌ನ ಇತರ ಪ್ರದೇಶಗಳಿಗೆ ಹೋಲಿಸಿದರೆ ನಾವು ಉಳಿದುಕೊಂಡಿರುವ (ರೊಮೇನಿಯಾ ಗಡಿಯ ಬಳಿ) ಪರಿಸ್ಥಿತಿ ಉತ್ತಮವಾಗಿದೆ," ಎಂದು ಹೇಳಿದರು. "ಉಕ್ರೇನ್ ವಿರುದ್ಧದ ದಾಳಿಯಿಂದಾಗಿ ಅನೇಕ ವಿದ್ಯಾರ್ಥಿಗಳು ಬಂಕರ್‌ಗಳಲ್ಲಿ ತಂಗಿದ್ದಾರೆ. ಪರಿಸ್ಥಿತಿ ಕಷ್ಟಕರವಾಗಿದೆ. ಸಮಯಕ್ಕೆ ಸರಿಯಾಗಿ ನಮ್ಮನ್ನು ಸ್ಥಳಾಂತರಿಸಿದ ಸರ್ಕಾರಕ್ಕೆ ಧನ್ಯವಾದಗಳು," ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications