ಲಾಟರಿ ಹೆಸರಲ್ಲಿ ಲಕ್ಷ ಲಕ್ಷ ವಂಚನೆ: ಇಬ್ಬರ ಬಂಧನ
ನವದೆಹಲಿ, ಮೇ 31: ಕೋಟ್ಯಧಿಪತಿ ಆಗ್ಬೇಕು ಅಂತ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ಕಷ್ಟಾನೆ ಪಡದೆ ನಿಮಗೆ ಲಕ್ಷಗಟ್ಟಲೆ ಗಣ ಸಿಗುತ್ತೆ ಅಂದರೆ ಯಾರು ತಾನೇ ಬೇಡ ಅಂತಾರೆ. ನಿಮಗೆ ಲಕ್ಷಗಟ್ಟಲೆ ಹಣ ಬಹುಮಾನವಾಗಿ ಬಂದಿದೆ ಆದರೆ ನೀವು ಅದನ್ನು ಪಡೆಯಲು ಒಂದಿಷ್ಟು ಹಣ ನೀಡಬೇಕು ಎನ್ನುವ ಮೆಸೇಜ್, ಫೋನ್ ಕರೆಗಳಿಗೇನು ಈಗ ಕೊರತೆಯಿಲ್ಲ. ನೀವೇನಾದರೂ ಹಣ ಬಂದಿದೆ ಅಂತ ನಂಬಿ ಅವರಿಗೆ ನಿಮ್ಮ ಬ್ಯಾಂಕ್ ವಿವರ ಕೊಟ್ಟರೆ ನಿಮ್ಮ ಖಾತೆಯಲ್ಲಿನ ಹಣ ಕ್ಷಣದಲ್ಲೇ ಮಂಗಮಾಯ ಆಗೋದಂತು ಪಕ್ಕಾ.
ಜನರ ಇದೇ ಮನಸ್ಥಿತಿಯನ್ನು ಬಂಡವಾಳವಾಗಿಸಿಕೊಂಡು ದೆಹಲಿಯಲ್ಲಿ ಜನರನ್ನು ವಂಚಿಸುತ್ತಿದ್ದ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. 'ಕೌನ್ ಬನೇಗಾ ಕರೋಡ್‌ಪತಿ' ಲಾಟರಿ ಬಹುಮಾನವಾಗಿ 25 ಲಕ್ಷ ರೂಪಾಯಿಗಳು ಬಂದಿದೆ ಎಂದು ನಂಬಿಸಿ 100 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಬಿಹಾರದ ಭೋಜ್‌ಪುರ ಜಿಲ್ಲೆಯ ನಿವಾಸಿ ಪ್ರಣವ್ ಕುಮಾರ್ ಮಿಶ್ರಾ (23) ಮತ್ತು ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ನಿವಾಸಿ ಗೌತಮ್ ಪ್ರಸಾದ್ ಯಾದವ್ (29) ಎನ್ನುವ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಹರ್ಯಾಣದಲ್ಲೂ ವಂಚಿಸಿದ್ದ ಆರೋಪಿಗಳು
ಇವರಿಬ್ಬರು ಈ ಹಿಂದೆ ಹರ್ಯಾಣದಲ್ಲಿ ಇದೇ ರೀತಿಯ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ನಂತರ ದೆಹಲಿಗೆ ಬಂದ ವಂಚಕರು ಮತ್ತೆ ಹಳೇ ಚಾಳಿ ಮುಂದುವರೆಸಿದ್ದರು. ದೆಹಲಿಯಲ್ಲೂ ವಂಚಿಸುವ ಕೆಲಸ ಮುಂದುವರೆಸಿದ್ದ ಇಬ್ಬರು ಆರೋಪಿಗಳು ಕಳೆದ ಒಂಬತ್ತು ತಿಂಗಳಲ್ಲಿ 100ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷದ ಆಸೆಗೆ ಹಣ ಕಳೆದುಕೊಂಡ ಮಹಿಳೆ
ದೆಹಲಿಯ ವಜೀರ್ ಪುರ ನಿವಾಸಿಯೊಬ್ಬರು ಹೇಳಿದಂತೆ, "ಮಾರ್ಚ್ 4ರಂದು ಅವರ ಪತ್ನಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಆಡಿಯೋ ರೆಕಾರ್ಡಿಂಗ್ ಬಂದಿತ್ತು. ಆಡಿಯೋದಲ್ಲಿ ಆಕೆಯ ಮೊಬೈಲ್ ಸಂಖ್ಯೆಯನ್ನು 25 ಲಕ್ಷ ರೂಪಾಯಿಗಳ ಕೆಬಿಸಿ ಲಾಟರಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿತ್ತು" ಎಂದು ಹೇಳಿದ್ದಾರೆ.
ಆರೋಪಿಯು ತನ್ನ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಕಳುಹಿಸಲು ಕೇಳಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಮರುದಿನ ಆಕೆಗೆ ಕರೆ ಮಾಡಿ ಲಾಟರಿ ಬಹುಮಾನ ಪಡೆಯಲು 10,200 ಮತ್ತು 2000 ರೂ.ಗಳನ್ನು ಸರ್ಕಾರದ ತೆರಿಗೆಯಾಗಿ ಪಾವತಿಸುವಂತೆ ತಿಳಿಸಿದ್ದಾರೆ.
ವಂಚಕರ ಮಾತನ್ನು ನಂಬಿದ ಮಹಿಳೆ ಅವರು ಹೇಳಿದ ಖಾತೆಗೆ 12,200 ರೂಪಾಯಿ ವರ್ಗಾಯಿಸಿದ್ದಾರೆ. ಇದಾದ ನಂತರ ಆರೋಪಿಯು ಮತ್ತೆ ಕೆಲವು ಸರ್ಕಾರಿ ತೆರಿಗೆ ಪಾವತಿಸಬೇಕು ಎಂದು 25,000 ರೂಪಾಯಿ ವರ್ಗಾಯಿಸುವಂತೆ ಕೇಳಿದ್ದಾರೆ. ಆಗ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ.

ಹಲವು ಜನರಿಗೆ ವಂಚಿಸಿರುವ ಆರೋಪಿಗಳು
ಹಲವು ಸ್ಥಳಗಳಲ್ಲಿ ದಾಳಿ ನಡೆಸಿರುವ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಉಷಾ ರಂಗಾನಿ ತಿಳಿಸಿದ್ದಾರೆ.
ಕೆಬಿಸಿ ಲಾಟರಿ ಬಹುಮಾನ ಬಂದಿದೆ ಹಣ ಕಳುಹಿಸುತ್ತೇವೆ ಎಂದು ಜನರನ್ನು ವಂಚಿಸುತ್ತಿದ್ದರು ಮತ್ತು ಒಂದೇ ವಿಧಾನದಲ್ಲಿ ಹಲವರಿಗೆ ವಂಚನೆ ಮಾಡಿದ್ದೇವೆ ಎಂದು ಆರೋಪಿಗಳು ವಿವರ ಬಹಿರಂಗಪಡಿಸಿದ್ದಾರೆ. ಹಣ ಪಡೆದ ನಂತರ ಅವರು ಜನರ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸರಿಂದ ಹೆಚ್ಚಿನ ತನಿಖೆ
"ಬಂಧಿತ ಆರೋಪಿ ಪ್ರಣವ್ ಸಂತ್ರಸ್ತರಿಗೆ ಕರೆ ಮಾಡಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಗೌತಮ್ ನಕಲಿ ದಾಖಲೆ ಬಳಸಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿ ಡೆಬಿಟ್ ಕಾರ್ಡ್‌ಗಳ ಮೂಲಕ ಹಣವನ್ನು ಪಡೆಯುತ್ತಿದ್ದ. ಜನರಿಗೆ ವಂಚಿಸಿದ ಬಳಿಕ ಸಿಮ್ ಕಾರ್ಡ್ ನಾಶಪಡಿಸುತ್ತಿದ್ದರು. ನಕಲಿ ದಾಖಲೆ ಬಳಸಿ ಸಿಮ್ ಕಾರ್ಡ್ ಪಡೆಯುತ್ತಿದ್ದರು" ಎಂದು ಡಿಸಿಪಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಐದು ಮೊಬೈಲ್ ಫೋನ್, 33 ಸಿಮ್ ಕಾರ್ಡ್, 11 ಡೆಬಿಟ್ ಕಾರ್ಡ್, ಐದು ಬ್ಯಾಂಕ್ ಪಾಸ್ ಬುಕ್ ಹಾಗೂ ಇತರೆ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಂಚನೆ ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications