ಮೋದಿ ಭರ್ಜರಿ ಗೆಲುವು ಕಾಣುತ್ತಿದ್ದಂತೆ 'ಶೆಹೆನ್ ಶಾ' ವಾದ್ರಾಗೆ ಸಂಕಷ್ಟ
ನವದೆಹಲಿ, ಮೇ 24 : ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮರುದಿನವೇ ಗಾಂಧಿ ಕುಟುಂಬದ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ಸಂಕಷ್ಟ ಎದುರಾಗಿದೆ.
ಮನಿ ಲಾಂಡ್ರಿಂಗ್ ಕೇಸ್ ನಲ್ಲಿ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಬೇಕೆಂದು ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟನ್ನು ಸಂಪರ್ಕಿಸಿದೆ. ಸಿಬಿಐ ವಿಶೇಷ ನ್ಯಾಯಾಲಯ ರಾಬರ್ಟ್ ವಾದ್ರಾ ಮತ್ತು ಅವರ ಸಹಾಯಕ ಮನೋಜ್ ಆರೋರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.
ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಗಂಡನಾಗಿರುವ ರಾಬರ್ಟ್ ವಾದ್ರಾ ಅವರು, ಕೆಲ ದಿನಗಳ ಹಿಂದೆಯೇ ತಮಗೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಭದ್ರತಾ ದೃಷ್ಟಿಯಿಂದ ಅವರ ಪ್ರವಾಸದ ಯಾವುದೇ ವಿವರವನ್ನು ಬಹಿರಂಗ ಪಡಿಸಬಾರದು ಎಂದು ವಾದ್ರಾ ಅವರ ವಕೀಲರು ಕೋರ್ಟನ್ನು ಕೋರಿದ್ದರು.

ಇದೇ ತಿಂಗಳು ಹರ್ಯಾಣಾದ ಫತೇಹ್ ಬಾಗ್ ನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿಯವರು, ಶಹೆನ್‌ಶಾ (ಸಾಮ್ರಾಟ) ರಾಬರ್ಟ್ ವಾದ್ರಾ ರೈತರನ್ನು ಲೂಟಿ ಮಾಡಿದ್ದಕ್ಕಾಗಿ ನ್ಯಾಯಾಲಯಕ್ಕೆ ಎಳೆತಂದಿದ್ದಕ್ಕಾಗಿ ನಡುಗುತ್ತಿದ್ದಾರೆ, ಅವರನ್ನು ಶೀಘ್ರದಲ್ಲಿಯೇ ಜೈಲಿಗೆ ಅಟ್ಟಲಾಗುವುದು ಎಂದು ನರೇಂದ್ರ ಮೋದಿಯವರು ಗುಡುಗಿದ್ದರು.
ಬೇನಾಮಿ ವ್ಯವಹಾರಗಳ ಮೂಲಕ ಅಕ್ರಮವಾಗಿ ಗಳಿಸಿದ ಹಣದಿಂದ ರಾಬರ್ಟ್ ವಾದ್ರಾ ಅವರು ಲಂಡನ್ ನಲ್ಲಿ ಹಲವಾರು ವಿಲ್ಲಾಗಳನ್ನು ಖರೀದಿಸಿದ್ದಾರೆ. ಅಲ್ಲದೆ ದುಬೈನಲ್ಲಿಯೂ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ, ನರೇಂದ್ರ ಮೋದಿಯವರ ಎರಡನೇ ಅವಧಿಯ ಸರಕಾರ ರಚನೆಗೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಬರ್ಟ್ ವಾದ್ರಾ ಅವರಿಗೂ ಸಂಕಷ್ಟ ಶುರುವಾಗಿದೆ.
ವಿದೇಶದಲ್ಲಿ ಸರಕಾರದ ಕಣ್ಣಿಗೆ ಮಣ್ಣೆರಚಿ, ಅಕ್ರಮವಾಗಿ ಆಸ್ತಿಪಾಸ್ತಿ ಮಾಡಿಕೊಂಡ ಆರೋಪ ಹೊತ್ತಿರುವ ರಾಬರ್ಟ್ ವಾದ್ರಾ ಅವರಿಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಮತ್ತು ಅವರ ಸಂಬಂಧಿಗಳೊಂದಿಗೆ ಇರುವ ಸಂಬಂಧವಾದರೂ ಏನು, ಅವರಿಗೆ ಫ್ರಾನ್ಸ್ ನಿಂದ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದವರು ಯಾರು? ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.












Click it and Unblock the Notifications