ತ್ರಿವಳಿ ತಲಾಖ್ ನಿಷೇಧಕ್ಕೆ ಹೊಸ ಮಸೂದೆ: ಇಂದು ನಿರ್ಧಾರ
ನವದೆಹಲಿ, ಜೂನ್ 12: ವಿವಾದಾತ್ಮಕ ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸಚಿವ ಸಂಪುಟ ಇಂದು ನಿರ್ಧಾರ ತೆಗೆದುಕೊಳ್ಳಲಿದೆ.
17 ನೇ ಲೋಕಸಭೆಯ ಮೊದಲ ಮುಂಗಾರು ಅಧಿವೇಶನ ಜೂನ್ 17 ರಿಂದ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ತ್ರಿವಳಿ ತಲಾಖ್ ನಿಷೇಧದ ಕುರಿತು ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯಲಿದೆ.
ಹದಿನಾರನೇ ಲೋಕಸಭೆಯಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಾದರೂ ಲೋಕಸಭೆಯ ಅವಧಿ ಮುಕ್ತಾಯವಾಗಿದ್ದರಿಂದ ಮತ್ತು ರಾಜ್ಯ ಸಭೆಯಲ್ಲೂ ಈ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ.

ವಿವಾದಾತ್ಮಕ ಪದ್ಧತಿ
ವಿವಾಹಿತ ಮಹಿಳೆಗೆ ವಿವಾಹ ವಿಚ್ಛೇದನ ನೀಡುವ ಒಂದು ರೀತಿಯ ಪದ್ಧತಿಯಾಗಿದೆ. ಈ ಪದ್ಧತಿಯಂತೆ ವಿವಾಹಿತ ಮುಸ್ಲಿಂ ವ್ಯಕ್ತಿಯು ತನ್ನ ಪತ್ನಿಗೆ ಕಾನೂನು ಮಾನ್ಯ ವಿಚ್ಛೇದನ ನೀದಿದ್ದೇನೆ ಎಂದು ಘೋಷಿಸಬಹುದಾಗಿದೆ. ಇದು ಮೌಖಿಕವಾಗಿರಬಹುದು ಅಥವಾ ಲಿಖಿತರೂಪದಲ್ಲಿರಬಹುದು ಅಥವಾ ಇ ಮಾಧ್ಯಮದ ಮೂಲಕ ಎಸ್ಎಂಎಸ್, ಟೆಲಿಫೋನ್ ಕಾಲ್, ಇಮೇಲ್ ಅಥವಾ ಫೇಸ್ ಬುಕ್, ವಾಟ್ಸಪ್ ಮೂಲಕ ಕೂಡಾ ತಲಾಖ್ ತಲಾಖ್ ತಲಾಖ್ ಎಂದು ಮೂರು ಬಾರಿ ಕಳಿಸಿ ವಿಚ್ಛೇದನ ನೀಡಿದ ಉದಾಹರಣೆಗಳಿವೆ.

ತಲಾಖ್ ಗೆ ನಿರ್ಬಂಧವಿಲ್ಲ!
ವಿಚ್ಛೇದನ ನೀಡುವ ವ್ಯಕ್ತಿಯು ಯಾವುದೇ ಕಾರಣ ನೀಡುವ ಅಗತ್ಯವಿಲ್ಲ. ವಿಚ್ಛೇದನ ನೀಡುವ ಸಮಯದಲ್ಲಿ ಹಾಜರಿರಬೇಕು ಎಂಬ ನಿಯಮವಿಲ್ಲ. ಇದ್ದಾತ್ ಅವಧಿಯ ನಂತರ ಪತ್ನಿಯು ಗರ್ಭಿಣಿಯಾಗಿದ್ದಾರೆ ವಿಚ್ಛೇದನದ ವಿಧಾನ ಬದಲಾಗಲಿದೆ. ಈ ಸಂದರ್ಭದಲ್ಲಿ ದಂಪತಿಗೆ ಸಲಹಾ ಸಮಿತಿಯ ಮುಂದೆ ಹಾಜರಾಗಿ, ಮತ್ತೆ ಒಂದಾಗುವ ಅವಕಾಶವಿರುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಖ್ ಹೇಳುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ. ಇದಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು?
2018 ರ ಆಗಸ್ಟ್ ನಲ್ಲಿ ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನಲ್ಲಿ, ಈ ಪದ್ಧತಿ ಅಪರಾಧ ಮತ್ತು ಅಸಾಂವಿಧಾನಿಕ ಎಂದಿತ್ತು. ನಂತರ ಈ ಕುರಿತು ಕಾನೂನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಲೋಕಸಭೆಯಲ್ಲಿ ಈ ಮಂಡನೆಗೆ ಅಂಗೀಕಾರ ದೊರೆತಿತ್ತಾದರೂ ರಾಜ್ಯ ಸಭೆಯಲ್ಲಿ ದೊರೆತಿರಲಿಲ್ಲ. ಅಷ್ಟರಲ್ಲೇ ಹಿಂದಿನ ಲೋಕಸಬೆಯ ಅವಧಿ ಮುಗಿದಿದ್ದರಿಂದ ಅದು ಜಾರಿಗೆ ಬಂದಿರಲಿಲ್ಲ.

ಹೊಸ ತಿದ್ದುಪಡಿ ಮಸೂದೆಯಲ್ಲೇನಿದೆ?
* ಅಕಸ್ಮಾತ್ ಮುಸ್ಲಿಂ ಪತಿ ತ್ರಿವಳಿ ತಲಾಖ್ ನೀಡಿದರೆ ಆತನ ವಿರುದ್ಧ ಪತ್ನಿ ಅಥವಾ ಯಾವುದೇ ಹತ್ತಿರದ ಬಂಧುಗಳು ದೂರು ನೀಡಬಹುದು.
* ಪತಿ ಸಂಧಾನಕ್ಕೆ ಬಂದರೆ ಅಥವಾ ರಾಜಿ ಮಾಡಿಕೊಳ್ಳಲು ಒಪ್ಪಿದರೆ ಆಕೆ ದೂರನ್ನು ವಾಪಸ್ ಪಡೆಯುವುದಕ್ಕೆ ಅವಕಾಶವಿದೆ.
* ಪತಿಯನ್ನು ತ್ರಿವಳಿ ತಲಾಖ್ ಪ್ರಕರಣದಲ್ಲಿ ಜೈಲಿಗಟ್ಟಬಹುದು ಮತ್ತು ಆತನಿಗೆ ಜಾಮೀನು ನೀಡಬೇಕೋ ಬೇಡವೋ ಎಂಬುದನ್ನು ಪತ್ನಿಯೊಂದಿಗೆ ಮಾತುಕತೆ ನಡೆಸಿಯೇ ಮ್ಯಾಜಿಸ್ಟ್ರೇಟ್ ತೀರ್ಪು ನೀಡಬೇಕು.
* ಮೌಖಿಕವಾಗಿ ತಲಾಖ್ ಹೇಳುವುದು ಅಥವಾ ವಾಟ್ಸಾಪ್, ಟೆಲಿಫೋನ್, ಪತ್ರ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಂಡು ತಲಾಖ್ ಸಂದೇಶ ಕಳಿಸಿ ವಿಚ್ಛೇದನ ಪಡೆಯುವುದನ್ನೂ ಈ ಕಾಯ್ದೆ ಅಪರಾಧವೆಂದಿದೆ.












Click it and Unblock the Notifications