ರಾಮ ಮಂದಿರ 'ಭರವಸೆ ಈಡೇರಿಸದ' ಬಿಜೆಪಿ ವಿರುದ್ಧ ವಿಎಚ್ ಪಿ ವಾಗ್ದಾಳಿ
ನವದೆಹಲಿ, ಡಿಸೆಂಬರ್ 9: ಆರೆಸ್ಸೆಸ್ ನ ಹಿರಿಯ ನಾಯಕ ಸುರೇಶ್ 'ಭೈಯ್ಯಾಜಿ' ಜೋಶಿ ಭಾನುವಾರದಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಆದ್ದರಿಂದ ಇದಕ್ಕಾಗಿ ಕಾನೂನು ರಚಿಸುವ ಅಗತ್ಯ ಕಂಡುಬಂದರೆ ಅದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಅವರು ಮಾತನಾಡಿ, "ಈಗ ಅಧಿಕಾರದಲ್ಲಿ ಇರುವವರು ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಈಗ ಜನರ ಧ್ವನಿಯನ್ನು ಕೇಳಿಸಿಕೊಳ್ಳಬೇಕು ಹಾಗೂ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣದ ಬೇಡಿಕೆಯನ್ನು ಈಡೇರಿಸಬೇಕು. ಅವರಿಗೆ ಭಾವನೆಗಳ ಬಗ್ಗೆ ಚೆನ್ನಾಗಿ ಅರಿವಿದೆ" ಎಂದು ಬಿಜೆಪಿ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿದ್ದಾರೆ.

ನಾವು ಅದಕ್ಕಾಗಿ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ದೇಶವು 'ರಾಮ ರಾಜ್ಯ'ದ ನಿರೀಕ್ಷೆಯಲ್ಲಿದೆ ಎಂದು ಅವರು ಹೇಳಿದ್ದಾರೆ. ಮಂಗಳವಾರದಂದು ಸಂಸತ್ ನ ಚಳಿಗಾಲದ ಅಧಿವೇಶನ ಆರಂಭ ಆಗಲಿದ್ದು, ಆ ಹಿನ್ನೆಲೆಯಲ್ಲಿ ಇಂದು ನಡೆದ ವಿಎಚ್ ಪಿ ಸಭೆಗೆ ಮಹತ್ವ ಇದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಅಯೋಧ್ಯಾ ಭೂ ವಿವಾದದ ಪ್ರಕರಣವು ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿದೆ. ಜನವರಿಯಲ್ಲಿ ವಿಚಾರಣೆಯ ದಿನಾಂಕವನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಅಂದ ಹಾಗೆ ಇಪ್ಪತ್ತೈದು ವರ್ಷಗಳಿಂದ ಈ ವಿವಾದವು ಬಗೆಹರಿದಿಲ್ಲ.












Click it and Unblock the Notifications