ಡೆಂಜರಪ್ಪೋ ಡೇಂಜರ್: ತಮಿಳುನಾಡು, ಬಂಗಾಳ, ತೆಲಂಗಾಣದಲ್ಲೂ ಓಮಿಕ್ರಾನ್!
ತಿರುವನಂತಪುರಂ, ಡಿಸೆಂಬರ್ 14: ಭಾರತದಲ್ಲೂ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ತನ್ನ ಹರಡುವಿಕೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣಗಳಲ್ಲಿ ಬುಧವಾರ ಮೊದಲ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ 7 ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಬಾಲಕ ಇತ್ತೀಚೆಗೆ ಅಬು ದುಬೈನಿಂದ ಹೈದ್ರಾಬಾದ್ ಮಾರ್ಗವಾಗಿ ಬಂಗಾಳಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಇದು ರಾಜ್ಯದಲ್ಲಿ ಪತ್ತೆ ಆಗಿರುವ ಮೊದಲ ಓಮಿಕ್ರಾನ್ ಪ್ರಕರಣವಾಗಿದೆ.
ತೆಲಂಗಾಣಕ್ಕೆ ಕೀನ್ಯಾದಿಂದ ಆಗಮಿಸಿದ 24 ವರ್ಷದ ಮಹಿಳೆ, ಸೋಮಾಲಿಯಾದಿಂದ ಆಗಮಿಸಿದ 23 ವರ್ಷದ ಯುವಕನಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ತಿಳಿದು ಬಂದಿದೆ. ಕಳೆದ ಡಿಸೆಂಬರ್ 12ರಂದು ಈ ಇಬ್ಬರು ಪ್ರಯಾಣಿಕರು ಹೈದ್ರಾಬಾದ್ ನಗರಕ್ಕೆ ಬಂದಿದ್ದರು ಎಂದು ಆರೋಗ್ಯ ಅಧಿಕಾರಿಗಳು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಒಂದೇ ಕುಟುಂಬದ ಆರು ಮಂದಿಗೆ ಕೊರೊನಾವೈರಸ್ ಸೋಂಕು
ನೈಜೀರಿಯಾದಿಂದ ತಮ್ಮ ಕುಟುಂಬ ಆರು ಸದಸ್ಯರೊಂದಿಗೆ ತಮಿಳುನಾಡಿಗೆ ಆಗಮಿಸಿದ 47 ವರ್ಷದ ವ್ಯಕ್ತಿಯಲ್ಲಿ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿದೆ. ಡಿಸೆಂಬರ್ 10ರಂದು 6 ಮಂದಿ ಕುಟುಂಬ ಸದಸ್ಯರೊಂದಿಗೆ ನೈಜೀರಿಯಾದಿಂದ ದೋಹಾ ಮಾರ್ಗವಾಗಿ ಆಗಮಿಸಿದ ವ್ಯಕ್ತಿಗಷ್ಟೇ ಅಲ್ಲದೇ ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮಹಾರಾಷ್ಟ್ರದಲ್ಲಿ ಬುಧವಾರವೂ ನಾಲ್ಕು ಪ್ರಕರಣ ಪತ್ತೆ
ಭಾರತದ ಮಟ್ಟಿಗೆ ಮಹಾರಾಷ್ಟ್ರ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಬುಧವಾರ ಕೂಡಾ ರಾಜ್ಯದಲ್ಲಿ ನಾಲ್ವರಿಗೆ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಈ ಪೈಕಿ ಒಬ್ಬರು ಮಹಿಳೆಯಾದರೆ ಉಳಿದ ಮೂವರು ಪುರುಷರಾಗಿದ್ದಾರೆ. ಎಲ್ಲ ಸೋಂಕಿತರು 16 ರಿಂದ 67 ವರ್ಷ ವಯೋಮಾನದೊಳಗಿನವರೇ ಆಗಿದ್ದಾರೆ. ಒಟ್ಟು ವರದಿಯಾದ ನಾಲ್ಕು ಪ್ರಕರಣಗಳಲ್ಲಿ ಎರಡು ಓಸ್ಮಾನಾಬಾದ್, ಒಬ್ಬರು ಮುಂಬೆ ಹಾಗೂ ಒಬ್ಬರು ಬುಲ್ದಾನಾ ಮೂಲದವರು ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಈವರೆಗೂ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ, ಆದರೆ ಈ ಒಟ್ಟು 32 ಸೋಂಕಿತ ಪ್ರಕರಣಗಳಲ್ಲಿ 25 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರಕ್ಕೆ ಜನವರಿಯಲ್ಲಿ ಓಮಿಕ್ರಾನ್ ಗಂಡಾಂತರ
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ವ್ಯಾಪಕ ಹಾಗೂ ವೇಗವಾಗಿ ಹರಡುತ್ತಿದ್ದು, ಮಹಾರಾಷ್ಟ್ರದಲ್ಲಿ ಹೊಸ ತಳಿಯ ಅಟ್ಟಹಾಸ ಹೆಚ್ಚಾಗುವ ಅಪಾಯವಿದೆ. ಜನವರಿ ತಿಂಗಳಿನಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡುವ ಸಾಧ್ಯತೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಓಮಿಕ್ರಾನ್ ಸೋಂಕು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ ತಿಳಿಸಿದ್ದಾರೆ. ಮಹಾರಾಷ್ಟ್ರ ಹೊರತಾಗಿ, ಕರ್ನಾಟಕ, ರಾಜಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ನವದೆಹಲಿ ಮತ್ತು ಚಂಡೀಗಢದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ವೈದ್ಯಕೀಯ ಪರೀಕ್ಷೆಯ ಅಂತಿಮ ವರದಿಯ ಕೈ ಸೇರುವವರೆಗೂ ವಿಮಾನ ನಿಲ್ದಾಣದಿಂದ ಹೊರಡುವುದಕ್ಕೆ ಅನುಮತಿ ಇರುವುದಿಲ್ಲ.

ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ಅಪಾಯ ಹೆಚ್ಚಿದ ದೇಶಗಳು
ಭಾರತದ ಆರು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸಬೇಕಿದ್ದಲ್ಲಿ ಡಿಸೆಂಬರ್ 20ರೊಗಳೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿರಬೇಕು. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್ ವಿಮಾನ ನಿಲ್ದಾಣಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸಾವಾನಾ, ಜಿಂಬಾಬ್ವೆ, ತಂಜಾನಿಯಾ, ಹಾಂಗ್ ಕಾಂಗ್, ಚೀನಾ, ಘಾನಾ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಇಸ್ರೇಲ್ ರಾಷ್ಟ್ರಗಳು ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳು ಎಂದು ಗುರುತಿಸಲಾಗಿದೆ.












Click it and Unblock the Notifications