ಪ್ರಧಾನಿ ಮೋದಿಗೆ ಸಚಿನ್ ರಿಂದ 'ಆರೋಗ್ಯ'ಕರ ಸಲಹೆ
ನವದೆಹಲಿ, ಅ.12: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಈಗ ಮೋದಿ ಅವರಿಗೆ ಒಂದು ಆರೋಗ್ಯಕರ ಸಲಹೆ ನೀಡಿದ್ದಾರೆ. ಸ್ವಚ್ಛತೆ ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ದೇಶ ಸುಭದ್ರ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತರ ಅಗತ್ಯ. ಅದಕ್ಕೆ ಹೆಚ್ಚು ಹೊತ್ತು ಕೊಡಬೇಕಾಗಿದೆ ಎಂದು ಸಚಿನ್ ಅಭಿಪ್ರಾಯಪಟ್ಟರು. ದೆಹಲಿಯಲ್ಲಿ ನಡೆದ ಸಿಆರ್ ಪಿಎಫ್ ಹಮ್ಮಿಕೊಂಡಿದ್ದ ರನ್ ಫಾರ್ ಯೂನಿಟಿ ಮ್ಯಾರಥಾನ್ ಗೆ ಚಾಲನೆ ನೀಡಿದ ನಂತರ ಸಚಿನ್ ಮಾತನಾಡಿದರು.
ಪ್ರಧಾನಮಂತ್ರಿ ಅವರ ಸ್ವಚ್ಛ ಭಾರತ್ ಯೋಜನೆಯನ್ನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಇದರ ಜತೆ ಜತೆಗೆ ಜನರ ಆರೋಗ್ಯದ ಬಗ್ಗೆಯೂ ಮೋದಿ ಅವರು ಗಮನ ಹರಿಸಲಿ ಎಂದು ತಿಳಿಸಿದ್ದಾರೆ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದರಿಂದ ಮಾಲಿನ್ಯ ನಿಯಂತ್ರಣಗೊಳ್ಳುತ್ತದೆ.

ಇದರ ಜತೆಗೆ ಕ್ರೀಡೆ, ವ್ಯಾಯಾಮ ಮತ್ತು ಆರೋಗ್ಯ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಹೊಸ ಅರಿವು ಮೂಡಬೇಕು. ಅದಕ್ಕಾಗಿ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಯೋಜನೆ ರೀತಿಯಲ್ಲೇ ಆಂದೋಲನ ನಡೆಯಬೇಕು ಎಂದು ಸಚಿನ್ ಹೇಳಿದ್ದಾರೆ. ಸ್ವಚ್ಛ ಭಾರತ ವಾಕ್ಯದ ಜತೆಗೆ ಆರೋಗ್ಯವಂತ ಜನರ ತಯಾರಿ ಆಗಬೇಕೆಂಬ ಕರೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಸಿಆರ್ ಪಿಎಫ್ ಯೋಧರನ್ನು ಹೊಗಳಿದ ಸಚಿನ್, ನಿಮ್ಮ ತ್ಯಾಗ ಬಲಿದಾನದಿಂದ ನಾವು ವರ್ಷ ವರ್ಷ ಎಲ್ಲಾ ಹಬ್ಬಗಳನ್ನು ನಮ್ಮ ಕುಟುಂಬದೊಡನೆ ಸಂತೋಷದಿಂದ ಆಚರಿಸುತ್ತಿದ್ದೇವೆ. ನಿಮ್ಮಂತೆ ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕುಟುಂಬ, ದೇಶದ ಹಿತಕ್ಕಾಗಿ ದುಡಿಯಬೇಕು ಎಂದರು.
ಈ ಸಮಾರಂಭದಲ್ಲಿ ಬಾಕ್ಸರ್ ವಿಜೇಂದ್ರ ಸಿಂಗ್, ಕುಸ್ತಿಪಟು ಯೋಗೇಶ್ವರ್ ದತ್, ನಟ ನಾನಾ ಪಾಟೇಕರ್, ಜಾನ್ ಅಬ್ರಹಾಂ, ಸಿಆರ್ ಪಿಎಫ್ ಪ್ರಧಾನ ನಿರ್ದೇಶಕ ದಿಲೀಪ್ ತ್ರಿವೇದಿ ಪಾಲ್ಗೊಂಡಿದ್ದರು.1939ರಲ್ಲಿ ಸ್ಥಾಪನೆಗೊಂಡ ಸಿಆರ್ ಪಿಎಫ್ ತಂಡ ದೇಶದ ಆಂತರಿಕ ಭದ್ರತೆ ಕಾಯುವುದಲ್ಲದೆ ಈಶಾನ್ಯ ರಾಜ್ಯ, ಜಮ್ಮು ಮತ್ತು ಕಾಶ್ಮೀರದ ಭದ್ರತೆಗೂ ಶ್ರಮಿಸುತ್ತಿದೆ. (ಪಿಟಿಐ)












Click it and Unblock the Notifications