ವಕೀಲ ಪ್ರಶಾಂತ್ ಭೂಷಣ್ ಗೆ ಸುಪ್ರೀಂ ಕೋರ್ಟ್ ನೋಟಿಸ್
ನವದೆಹಲಿ, ಫೆಬ್ರವರಿ 6: ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ನೀಡಲಾಗಿದೆ. ನಾಗೇಶ್ವರ್ ರಾವ್ ಅವರನ್ನು ಮಧ್ಯಂತರವಾಗಿ ಸಿಬಿಐ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿದಾಗ ನಿಂದನಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ಪ್ರಶಾಂತ್ ಭೂಷಣ್ ವಿರುದ್ಧ ಕೇಂದ್ರ ಸರಕಾರ ಹಾಗೂ ಅಟಾರ್ನಿ ಜನರಲ್ ಆರೋಪವಾಗಿದೆ.
ಕೋರ್ಟ್ ನಲ್ಲಿದ್ದ ಪ್ರಶಾಂತ್ ಭೂಷಣ್, ತಮ್ಮ ಪ್ರತಿಕ್ರಿಯೆಯನ್ನು ನೀಡಲು ಮೂರು ವಾರಗಳ ಸಮಯ ನೀಡಬೇಕು ಎಂದು ಕೋರ್ಟ್ ಅನ್ನು ಕೇಳಿಕೊಂಡಿದ್ದಾರೆ. ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮಾತನಾಡಿ, ಸರಕಾರದ ವಿರುದ್ಧ ಪ್ರಶಾಂತ್ ಭೂಷಣ್ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
"ಆರೋಪ ಮಾಡುವ ಬದಲಿಗೆ ಸಭೆಯಲ್ಲಿ ನಡೆದ ಚರ್ಚೆಯ ಮುಖ್ಯಾಂಶವನ್ನು ಕೋರಿ ಪ್ರಶಾಂತ್ ಅರ್ಜಿ ಹಾಕಬಹುದಿತ್ತು. ವಕೀಲರಾದವರು ಕೋರ್ಟ್ ನಲ್ಲಿರುವ ವಿಚಾರದ ಬಗ್ಗೆ ಬರೆಯಬಹುದಾ ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರ ರೂಪಿಸುವ ಸಮಯ ಬಂದಿದೆ" ಎಂದು ವೇಣುಗೋಪಾಲ್ ಹೇಳಿದರು. ಇದೇ ವಿಚಾರವಾಗಿ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.

ಶಿಕ್ಷೆಯ ಬಗ್ಗೆಯಾಗಲೀ ಅಥವಾ ಈ ವಿಚಾರದ ದೊಡ್ಡ ಮಟ್ಟದ ಪ್ರಭಾವದ ಬಗ್ಗೆಯಾಗಲೀ ವೇಣುಗೋಪಾಲ್ ಒತ್ತು ನೀಡಿ, ಏನನ್ನೂ ಹೇಳಿಲ್ಲ. ಆದರೆ ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ ಮಾತನಾಡಿ, ಪ್ರಶಾಂತ್ ಭೂಷಣ್ ಹೀಗೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದ್ದರಿಂದ ಅವರಿಗೆ ಶಿಕ್ಷೆ ಆಗಬೇಕು ಎಂದು ಕೇಂದ್ರ ಬಯಸುತ್ತದೆ ಎಂದಿದ್ದಾರೆ.












Click it and Unblock the Notifications