ಅಯೋಧ್ಯೆ ವಿವಾದ: ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್
ನವದೆಹಲಿ, ಅಕ್ಟೋಬರ್ 29: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯ ದಿನಾಂಕವನ್ನು 2019 ರ ಜನವರಿ ತಿಂಗಳಿನಲ್ಲಿ ನಿಗದಿಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯಪೀಠ ಮುಂದೂಡಿದೆ.

ವಿಚಾರಣೆಯ ದಿನಾಂಕವನ್ನು ಜನವರಿಯಲ್ಲಿ ನಿರ್ಧರಿಸಲಾಗುವುದು ಎಂದು ಪೀಠ ಹೇಳಿದೆ. ಜನವರಿಯಲ್ಲಿ ಅಯೋಧ್ಯೆ ಕುರಿತು ಪ್ರತಿದಿನವೂ ವಿಚಾರಣೆ ನಡೆಯುತ್ತದೆ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಉತ್ತರ ನೀಡಿಲ್ಲ. ಕೇವಲ ಎರಡೇ ನಿಮಿಷಗಳ ಕಾಲ ನಡೆದ ಕಲಾಪದಲ್ಲಿ ವಿಚಾರಣೆಯ ದಿನಾಂಕವನ್ನು ಮುಂದೂಡಲಾಯಿತು.
ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.
ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ ಎಂದು 1994ರ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಜೊತೆಗೆ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಕಾನೂನೊಂದನ್ನು ರೂಪಿಸಬೇಕಿದೆ ಎಂದು ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications