ತಲಾಖ್ ವಿರುದ್ಧ ಗೆದ್ದ 5 ಮುಸ್ಲಿಂ ಮಹಿಳೆಯರು ಇವರೇ!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 23: 'ನಾನು ಎದುರಿಸಿದ ಆ ಕೆಟ್ಟ ಅನುಭವವನ್ನು ನನ್ನ ಮಗಳು ಅನುಭವಿಸುವುದಿಲ್ಲ ಎಂಬ ಭರವಸೆ ಈಗ ಮೂಡಿದೆ...' ಇದು ತ್ರಿವಳಿ ತಲಾಖ್ ನಿಷೇಧಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶಯರಾ ಬಾನೊ ನಿರಾಳತೆಯಿಂದ ಹೇಳಿದ ಮಾತು.

ಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ 'ತ್ರಿವಳಿ ತಲಾಖ್' ತೀರ್ಪು

ಈ ಮಾತು ಕೇವಲ ಶಯರಾ ಬಾನೋ ಅವರದಷ್ಟೇ ಅಲ್ಲ, ಸಮಸ್ತ ಮುಸ್ಲಿಂ ಸಮಾಜದ ಶೋಷಿತ ಮಹಿಳೆಯರ ನಿಟ್ಟುಸಿರ ಮಾತು ಇದೇ! ತೊಟ್ಟ ಬುರ್ಖಾದ ಹಿಂದೆ ಅಭಿವ್ಯಕ್ತಿಯಾಗದೆ ಉಳಿದ ನೋವಿನ ಧ್ವನಿಗೆ ಅಂತೂ ಸಾಂತ್ವನ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಿನ್ನೆ(ಆಗಸ್ಟ್ 23) ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿ ತೀರ್ಪು ನೀಡುತ್ತಿದ್ದಂತೆಯೇ ಅಸಂಖ್ಯಾತ ಮುಸ್ಲಿಂ ಮಹಿಳೆಯರು ಆನಂದಭಾಷ್ಪ ಸುರಿಸಿದ್ದು ಸುಳ್ಳಲ್ಲ.

ಆದರೆ ಈ ತೀರ್ಪಿನ ಹಿಂದೆ ಇರುವ ಐವರು ವೀರ ಮಹಿಳೆಯರ ಕತೆ ಹಲವರಿಗೆ ತಿಳಿದಿಲ್ಲದಿರಬಹುದು. ತಮ್ಮ ಪರಿಸ್ಥಿತಿ ತಮ್ಮ ಮಕ್ಕಳಿಗೂ, ತಮ್ಮಂಥ ಮತ್ತಷ್ಟು ಮುಸ್ಲಿಂ ಮಹಿಳೆಯರಿಗೂ ಬರಬಾರದೆಂಬ ಕಾರಣಕ್ಕೆ ತ್ರಿವಳಿ ತಲಾಖ್ ಎಂಬ ಅನಿಷ್ಠ ಪದ್ಧತಿಯ ವಿರುದ್ಧ ಹೋರಾಡಿದ ಧೈರ್ಯವಂತ ಮಹಿಳೆಯರು ಇವರು.

ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ : ಮಂಗಳೂರಿಗರು ಏನಂತಾರೆ?

ಶಯರಾ ಬಾನೊ, ಇಶ್ರತ್ ಜಹಾನ್, ಗುಲ್ಷನ್ ಪರ್ವಿನ್, ಅತಿಯಾ ಸಾಬ್ರಿ, ಆಫ್ರೀನ್ ರೆಹ್ಮಾನ್ ಎಂಬ ಐವರು ಮಹಿಳೆಯರೂ ತ್ರಿವಳಿ ತಲಾಖ್ ಎಂಬ ಅನಿಷ್ಟಕ್ಕೆ ಬಲಿಪಶುವಾದವರು. ಈ ಐವರು ಮಹಿಳೆಯರ ನಿರಂತರ ಹೋರಾಟದ ಫಲವಾಗಿ ಇಂದು ಲಕ್ಷಾಂತರ ಮುಸ್ಲಿಂ ಮಹಿಳೆಯರು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಈ ಐವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಶಯರಾ ಬಾನೊ

ಶಯರಾ ಬಾನೊ

ಉತ್ತರಾಖಂಡದ ಉಧಮ್ ಸಿಂಗ್ ನಗರದ ಕಾಶಿಪುರದ ಶಯಾರಾ ಬಾನು(38) ಇಬ್ಬರು ಮಕ್ಕಳ ತಾಯಿ. ವ್ಯಾಪಾರಿ ರಿಜ್ವಾನ್ ಅಹ್ಮದ್ ಅವರನ್ನು ಮದುವೆಯಾಗಿದ್ದ ಶಯಾರಾ ಬಾನು ಅವರನ್ನು 15 ವರ್ಷದ ನಂತರ ಪತಿ ತ್ರಿವಳಿ ತಲಾಖ್ ಮೂಲಕ ತೊರೆದಿದ್ದ. ಆತ ತ್ರಿವಳಿ ತಲಾಖ್ ಕಳಿಸಿದ್ದು, ಸ್ಪೀಡ್ ಪೋಸ್ಟ್ ಮೂಲಕ!

ಸತತವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಅತ್ತೆ-ಮಾವ ಮತ್ತು ಪತಿ, ಶಯರಾ ಅವರಿಗೆ ಆರು ಬಾರಿ ಗರ್ಭಪಾತ ಸಹ ಮಾಡಿಸಿದ್ದರು! ಸದ್ಯಕ್ಕೆ ಎಂಬಿಎ ಓದುತ್ತಿರುವ ಶಯರಾ ಬಾನೊ ತಾನು ಒಳ್ಳೆಯ ಉದ್ಯೋಗ ಪಡೆಯುತ್ತೇನೆ, ನಂತರ ಮುಸ್ಲಿಂ ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಕಾಪಾಡಲು ಹೋರಾಡುತ್ತೇನೆ ಎನ್ನುತ್ತಾರೆ. ತ್ರಿವಳಿ ತಲಾಖ್ ನಿಷೇಧಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ಈಕೆ ಮೊದಲಿಗರು!(ಚಿತ್ರಕೃಪೆ: ಎಎನ್ ಐ)

ಇಶ್ರತ್ ಜಹಾನ್

ಇಶ್ರತ್ ಜಹಾನ್

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಪಿಲ್ಖಾನಾ ಎಂಬ ಹಳ್ಳಿಯ ಇಶ್ರಾತ್ ಜಹಾನ್ ಗೆ ನಾಲ್ವರು ಮಕ್ಕಳು. ಮದುವೆಯಾಗಿದ್ದು 15 ನೇ ವಯಸ್ಸಿನಲ್ಲಿ! ದುಬೈನಲ್ಲಿದ್ದ ಪತಿ ಈಕೆಗೆ ಫೋನ್ ಮೂಲಕವೇ ತಲಾಖ್ ನೀಡಿದ್ದ. ಆಗಿನಿಂದ ಮನೆಕೆಲಸ ಮಾಡುತ್ತಲೇ ಬದುಕು ಸಾಗಿಸುತ್ತಿರುವ ಇಶ್ರತ್ ಜಹಾನ್, ತಾನು ಮುಸ್ಲಿಂ ಪದ್ಧತಿಗಳ ವಿರೋಧಿಯಲ್ಲ. ಆದರೆ ಮುಸ್ಲಿಂ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂಬುದು ನನ್ನ ಇಂಗಿತ ಎನ್ನುತ್ತಾರೆ.

ಗುಲ್ಷನ್ ಪರ್ವಿನ್

ಗುಲ್ಷನ್ ಪರ್ವಿನ್

ಉತ್ತರ ಪ್ರದೇಶದ ರಾಂಪುರದ 31 ವರ್ಷದ ಗುಲ್ಷನ್ ಪರ್ವಿನ್ ತನ್ನ ಪತಿಯಿಂದ 10 ರೂಪಾಯಿಯ ಸ್ಟಾಂಪ್ ಪೇಪರ್ ಮೂಲಕ ತಲಾಖ್ ಸಂದೇಶ ಪಡೆದಿದ್ದರು!
ಆದರೆ ಈ ತಲಾಖ್ ಅನ್ನು ತಾನು ಒಪ್ಪುವುದಿಲ್ಲ, ತನಗಿರುವ ಎರಡು ವರ್ಷ ವಯಸ್ಸಿನ ಮಗು ಅನಾಥವಾಗುತ್ತದೆ, ನಾವು ನಿರ್ಗತಿಕರಾಗುತ್ತೇವೆ ಎಂದು ಆಕೆ ಅಲವತ್ತುಕೊಂಡಿದ್ದರು.
ಅತ್ತೆ-ಮಾವ ಮತ್ತು ಪತಿ ತಮಗೆ ವರದಕ್ಷಿಣೆ ಕಿರುಕುಳವನ್ನೂ ನೀಡುತ್ತಿದ್ದಾರೆಂದು ಗುಲ್ಷನ್ ದೂರು ನೀಡಿದ್ದರು. ಆಕೆಯ ಪತಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪರ್ವಿನ್ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ತ್ರಿವಳಿ ತಲಾಖ್ ವಿರುದ್ಧ ಅವರೂ ಅರ್ಜಿ ಸಲ್ಲಿಸಿದ್ದರು.

ಆತಿಯಾ ಸಾಬ್ರಿ

ಆತಿಯಾ ಸಾಬ್ರಿ

ಉತ್ತರ ಪ್ರದೇಶದ ಸಹರಾಪುರದ ಅತಿಯಾ ಸಾಬ್ರಿ(38) 2012 ರಲ್ಲಿ ವಾಜಿದ್ ಅಲಿ ಎಂಬುವವರನ್ನು ಮದುವೆಯಾಗಿದ್ದರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಈಕೆಯ ಪತಿ ತಲಾಖ್ ನೋಟೀಸ್ ಕಳಿಸಿದ್ದು ಹರಿದ ಕಾಗದದಲ್ಲಿ! ನಂತರ ವರದಕ್ಷಿಣೆ ಕಿರುಕುಳದ ದೂರು ನೀಡಿದ ಆತಿಯಾ ಸಾಬ್ರಿ ತ್ರಿವಳಿ ತಲಾಖ್ ವಿರುದ್ಧವೂ ಅರ್ಜಿ ಸಲ್ಲಿಸಿದ್ದರು.
ತಮ್ಮಇಬ್ಬರು ಹೆಣ್ಣು ಮಕ್ಕಳೂ ತಮ್ಮಂತೆ ಕಷ್ಟ ಅನುಭವಿಸಬಾರದು ಎಂಬುದು ಅವರ ಕಾಳಜಿ.

ಜೈಪುರದ 27 ವರ್ಷದ ಆಫ್ರೀನ್ ರೆಹ್ಮಾನ್ ಗೆ ಆಕೆಯ ಪತಿ ತ್ರಿವಳಿ ತಲಾಖ್ ನೋಟೀಸ್ ಕಳಿಸಿದ್ದು ಸ್ಪೀಡ್ ಪೋಸ್ಟ್ ಮೂಲಕ.

ಜೈಪುರದ 27 ವರ್ಷದ ಆಫ್ರೀನ್ ರೆಹ್ಮಾನ್ ಗೆ ಆಕೆಯ ಪತಿ ತ್ರಿವಳಿ ತಲಾಖ್ ನೋಟೀಸ್ ಕಳಿಸಿದ್ದು ಸ್ಪೀಡ್ ಪೋಸ್ಟ್ ಮೂಲಕ.

2014 ರಲ್ಲಿ ಈಕೆಯನ್ನು ಮದುವೆಯಾಗಿದ್ದ ವಾರಿಸ್ ಎಂಬ ವ್ಯಕ್ತಿ ಒಂದೇ ತಿಂಗಳಿನಲ್ಲಿ ಈಕೆಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ. ಆತನ ತಂದೆ-ತಾಯಿ ಸಹ ಅದಕ್ಕೆ ಬೆಂಬಲ ನೀಡುತ್ತಿದ್ದರು. ನಂತರ 2015 ರಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ಜಗಳವಾಡಿ, ಆಕೆಗೆ ಹಿಂಸೆ ನೀಡಿ ಮನೆಯಿಂದ ಹೊರಹಾಕಲಾಯ್ತು. ನಂತರ ಹರಿದ ಕಾಗದವೊಂದರಲ್ಲಿ ತ್ರಿವಳಿ ತಲಾಖ್ ಸಂದೇಶವನ್ನು ಬರೆದು ಸ್ಪೀಡ್ ಪೋಸ್ಟ್ ಮೂಲಕ ಆಕೆಗೆ ನೀಡಲಾಯ್ತು! ಈ ಘಟನೆಯ ನಂತರ ತ್ರಿವಳಿ ತಲಾಖ್ ನಿಷೇಧಿಸುವಂತೆ ಆಫ್ರೀನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Muslim women happily welcomed supreme court's verdict on triple talaq, in which it quoted triple talaq is unconstitutional. Here is a list of muslim women who struggle for ban on triple talaq in India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ