ಎರಡನೇ ದಿನವೂ ಸಿಎಎ ಪರ-ವಿರೋಧಿ ಗುಂಪುಗಳ ನಡುವೆ ಕಲ್ಲು ತೂರಾಟ
ನವದೆಹಲಿ, ಫೆಬ್ರವರಿ.24: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯು ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ. ದೆಹಲಿ ಈಶಾನ್ಯ ಭಾಗದಲ್ಲಿ ಇರುವ ಮೌಜ್ ಪುರ್ ನಲ್ಲಿ ಸೋಮವಾರವೂ ಕೂಡಾ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ.
ಸಿಎಎ ಪರ ಮತ್ತು ಸಿಎಎ ವಿರೋಧಿ ಗುಂಪಿನ ಜನರು ಪರಸ್ಪರ ಎರಡನೇ ದಿನವೂ ಕಲ್ಲುತೂರಾಟ ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಪೊಲೀಸ್ ಭದ್ರತೆಯನ್ನು ಮಾಡಿದ್ದಾರೆ.
ಭಾನುವಾರವಷ್ಟೇ ಮೌಜ್ ಪುರ್ ನಲ್ಲಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿಯ ನಿಯಂತ್ರಿಸಲು ಪೊಲೀಸರು ಅಶ್ವವಾಯು ಸಿಡಿಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಕೂಡಾ ಅಂಥದ್ದೆ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರವೂ ಜಫ್ರಾಬಾದ್ ಮೆಟ್ರೋ ನಿಲ್ದಾಣ ಬಂದ್:
ದೆಹಲಿಯ ಜಫ್ರಾಬಾದ್ ಮೆಟ್ರೋ ರೈಲ್ವೆ ನಿಲ್ದಾಣದ ಎದುರು ನೆರೆದ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇದರಿಂದ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿದ್ದು, ಈ ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆಯನ್ನೂ ಕೂಡಾ ಬಂದ್ ಮಾಡಲಾಗಿದೆ. ಇದರ ಜೊತೆಗೆ ಸೋಮವಾರ ಮೌಜ್ ಪುರ್ ಮತ್ತು ಬಾಬರ್ ಪುರ್ ಮೆಟ್ರೋ ನಿಲ್ದಾಣಗಳನ್ನೂ ಕೂಡಾ ಬಂದ್ ಮಾಡಲಾಗಿದೆ.
ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.












Click it and Unblock the Notifications