ಸೋನಿಯಾ, ರಾಹುಲ್ ಸೇರಿ ಜಾಮೀನಿನ ಮೇಲಿರುವ ಕಾಂಗ್ರೆಸ್ ನಾಯಕರು ಯಾರ್ಯಾರು?
ನವದೆಹಲಿ, ಆಗಸ್ಟ್ 22: ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು ಬಂಧನಕ್ಕೊಳಗಾದ ನಂತರ ಕಾಂಗ್ರೆಸ್ ನ ಹಲವು ನಾಯಕರ ನಿದ್ದೆಗೆಟ್ಟಿದೆ. ಏಕೆಂದರೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಘಟಾನುಘಟಿಗಳೆಲ್ಲ ಸದ್ಯಕ್ಕೆ ಜಾಮೀನಿನ ಮೇಲೆ ಹೊರಗಿರುವಂಥವರು!
ಐಎನ್ ಎಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಅವರನ್ನು ಬುಧವಾರ ಸಿಬಿಐ ಪೊಲೀಸರು ನವದೆಹಲಿಯ ಅವರ ನಿವಾಸದಲ್ಲೇ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಜಾಮೀನಿನ ಮೇಲಿರುವ ಕಾಂಗ್ರೆಸ್ ಮುಖಂಡರಲ್ಲಿ ಅತಂಕ ಆರಂಭವಾಗಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಂಸದ ಶಶಿ ತರೂರ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಉತ್ತರ ಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಮುಖಂಡ ರಾಜ್ ಬಬ್ಬರ್ , ಪಂಜಾಬಿನ ಮಾಜಿ ಮಂತ್ರಿ ನವಜೋತ್ ಸಿಂಗ್ ಸಿಧು, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಈ ಎಲ್ಲ ನಾಯಕರೂ ಬೇರೆ ಬೇರೆ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಂಧನಕ್ಕೊಳಗಾಗದೆ ಉಳಿದಿದ್ದಾರೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ವಂಚನೆ ಸಂಚಿನ ಪ್ರಯತ್ನ ಮತ್ತು ಹಣಕಾಸು ನಿಧಿಯ ದುರ್ಬಳಕೆ ಪ್ರಕರಣವನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2012ರಲ್ಲಿ ದಾಖಲಿಸಿದ್ದರು. ನ್ಯಾಷನಲ್ ಹೆರಾಲ್ಡ್ ಸುದ್ದಿಪತ್ರಿಕೆಯ ಮಾಲೀಕರಾಗಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಮಿಟೆಡ್ ಗೆ 90.25 ಕೋಟಿ ರೂಪಾಯಿ ಸಾಲವನ್ನು ಬಡ್ಡಿರಹಿತರವಾಗಿ ಕಾಂಗ್ರೆಸ್ ಪಕ್ಷ ನೀಡಿತ್ತು ಎಂಬುದು ಆರೋಪವಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದ್ದು, ಸೋನಿಯಾ ಮತ್ತು ರಾಹುಲ್ ಗಾಂಧಿ ಇಬ್ಬರೂ ಜಾಮೀನಿನ ಮೇಲೆ ಹೊರಗುಳಿದಿದ್ದಾರೆ.
ಪತ್ನಿ ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶಶಿ ತರೂರ್ ಅವರು ಜಾಮೀನು ಪಡೆದಿದ್ದಾರೆ.

ಯೋಗಗುರು ಬಾಬಾ ರಾನದೇವ್ ಅವರ ವಿರುದ್ಧ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ನ ಹಿರಿಯ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಪಂಜಾಬಿನ ಪಟಿಯಾಲದ ರಸ್ತೆಯಲ್ಲಿ ಗಲಭೆಯೊಂದರಲ್ಲಿ 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಅವರ ತಲೆಗೆ ಬಲವಾಗಿ ಏಟು ಬಿದ್ದಿತ್ತು. ಅದಕ್ಕೆ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಕಾರಣ ಎಂದು ದೂರಿ ಕೇಸು ದಾಖಲಿಸಲಾಗಿತ್ತು. ಆದರೆ ಅವರಿಗೆ ನಂತರ ಜಾಮೀನು ನೀಡಲಾಗಿತ್ತು.












Click it and Unblock the Notifications